ವಾರಂಗಲ್‌[ಮೇ.21]: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಆಟಗಾರ ಹನುಮ ವಿಹಾರಿ ಭಾನುವಾರ ತಮ್ಮ ಬಹುದಿನಗಳ ಗೆಳತಿ ಪ್ರೀತಿರಾಜ್‌ ಯರುವಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

ಇಲ್ಲಿನ ಹನಮಕೊಂಡದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತು. 1500ಕ್ಕೂ ಹೆಚ್ಚು ಅತಿಥಿಗಳು ನವ ವಧುವರರಿಗೆ ಆಶೀರ್ವದಿಸಿದರು. ವಿಹಾರಿ ತಮ್ಮ ವಿವಾಹದ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.

2018ರ ಡಿಸೆಂಬರ್ 07ರಂದು ಹನುಮ ವಿಹಾರಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಇದುವರೆಗೂ ವಿಹಾರಿ 4 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇನ್ನು 12ನೇ ಆವೃತ್ತಿಯ ಐಪಿಎಲ್’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.