ನೆವಾರ್ಕ್[ಜು.15]: ಭಾರತದ ತಾರಾ ಬಾಕ್ಸರ್‌ ವಿಜೇಂದರ್‌ ಸಿಂಗ್‌, ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಜೇಯವಾಗಿ ಉಳಿದಿದ್ದಾರೆ. ಶನಿವಾರ ಇಲ್ಲಿ ನಡೆದ ಬೌಟ್‌ನಲ್ಲಿ ಅಮೆರಿಕದ ಮೈಕ್‌ ಸ್ನೈಡರ್‌ ವಿರುದ್ಧ ವಿಜೇಂದರ್‌ ತಾಂತ್ರಿಕ ನಾಕೌಟ್‌ನಿಂದ ಗೆಲುವು ಸಾಧಿಸಿದರು. 

ಅಮೆರಿಕದಲ್ಲೂ ವಿಜೇಂದರ್ ಬಾಕ್ಸಿಂಗ್..!

8 ಸುತ್ತುಗಳ ಪಂದ್ಯದ ಮೊದಲ 4 ಸುತ್ತುಗಳನ್ನು ತಮ್ಮದಾಗಿಸಿಕೊಂಡ ವಿಜೇಂದರ್‌ರನ್ನು ವಿಜಯಿ ಎಂದು ಘೋಷಿಸಲಾಯಿತು. 4ನೇ ಸುತ್ತಿನ 2ನೇ ನಿಮಿಷದಲ್ಲಿ ವಿಜೇಂದರ್‌, ಸ್ನೈಡರ್‌ ಮೇಲೆ ಪ್ರಬಲ ಪಂಚ್‌ಗಳನ್ನು ಪ್ರಯೋಗಿಸುತ್ತಿದ್ದಂತೆ ರೆಫ್ರಿ ಫಲಿತಾಂಶವನ್ನು ಭಾರತೀಯ ಬಾಕ್ಸರ್‌ ಪರ ನೀಡಿದರು. 

ಹರ್ಯಾಣ ಮೂಲದ 33 ವರ್ಷದ ವಿಜೇಂದರ್ ಈ ವರೆಗೂ 11 ಪಂದ್ಯಗಳನ್ನು ಆಡಿದ್ದು 11ರಲ್ಲೂ ಜಯಿಸಿದ್ದಾರೆ. ಈ ಪೈಕಿ 8ರಲ್ಲಿ ನಾಕೌಟ್‌ ಮೂಲಕ ಗೆದ್ದಿದ್ದಾರೆ.