ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ದಾಖಲೆ ಬರೆದ ಅಚಿಂತಾ ಶೆಯುಲಿ!
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರಾಕ್ರಮ ಮುಂದುವರಿದಿದೆ. ವೈಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ಇತಿಹಾಸ ಬರೆದಿದೆ. ಇದೀಗ ಅಚಿಂತಾ ಶೆಯುಲಿ ಭಾರತಕ್ಕೆ 3ನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.
ಬರ್ಮಿಂಗ್‌ಹ್ಯಾಮ್(ಆ.01): ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 3ನೇ ಚಿನ್ನದ ಪದಕ ಬಾಚಿಕೊಂಡಿದೆ. ಭಾರತದ ವೈಟ್‌ಲಿಫ್ಟರ್ ಅಚಿಂತಾ ಶೆಯುಲಿ ಪುರುಷರ 73 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. 143 ಕೆಜಿ ಭಾರ ಎತ್ತುವ ಮೂಲಕ ಅತ್ಯಧಿಕ ವೈಟ್ ಲಿಫ್ಟ್ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಇಷ್ಟೇ ಅಲ್ಲ ಇದು ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಹೊಸ ದಾಖಲೆಯಾಗಿದೆ. ಇನ್ನು ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 170 ಕೆಜಿ ಎತ್ತುವ ಮೂಲಕ ಒಟ್ಟು 313 ಕೆಜಿ ವೈಟ್ ಲಿಫ್ಟ್ ಮಾಡುವ ಮೂಲಕ ಭಾರತಕ್ಕೆ ಚಿನ್ನದ ಕಿರೀಟ ತೊಡಿಸಿದರು. ಭಾರತದ ಸ್ಪರ್ಧಿಗಳ ಪೈಕಿ ಅಚಿಂತಾ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ ಕ್ರೀಡಾಪಟು. ಭಾರತೀಯರ ನಿರೀಕ್ಷೆಗಳನ್ನು ಉಳಿಸಿಕೊಂಡಿರುವಅಚಿಂತಾ, ಹೊಸ ದಾಖಲೆ ಬರೆದಿದ್ದಾರೆ. ಅಚಿಂತಾ ಚಿನ್ನದ ಪದಕ ಸಾಧನೆಯೊಂದಿಗೆ ಭಾರತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 6 ಪದಕ ಬಾಚಿಕೊಂಡಿದೆ. ಮಹಿಳಾ ವೈಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು, ಪುರುಷರ 67 ಕೆಜಿ ವಿಭಾಗದಲ್ಲಿ ಜೆರೆಮಿ ಲಾಲ್ರಿನ್ನುಂಗಾ ಬಳಿಕ ಅಚಿಂತಾ ಶುಯೆಲಿ 3ನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸದ್ಯ ಪದಕ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ. 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದ ಮೂಲಕ ಒಟ್ಟು 6 ಪದಕ ಗೆದ್ದುಕೊಂಡಿದೆ. ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 22 ಚಿನ್ನ, 13 ಬೆಳ್ಳಿ ಹಾಗೂ 17 ಕಂಚಿನ ಪದಕದ ಜೊತೆ ಒಟ್ಟು 52 ಪದಕಗಳನ್ನು ಗೆದ್ದುಕೊಂಡಿದೆ.
ಅಚಿಂತಾ ಮೊದಲ ಸ್ನ್ಯಾಚ್ ಯತ್ನದಲ್ಲಿ 137 ಕೆಜಿ ಭಾರ ಎತ್ತಿದರೆ, ಎರಡನೇ ಪ್ರಯತ್ನದಲ್ಲಿ 140 ಕೆಜಿ ಭಾರ ಎತ್ತಿದರು. ಮೂರನೇ ಪ್ರಯತ್ನದಲ್ಲಿ 143 ಕೆಜಿ ಭಾರ ಎತ್ತುವ ಮೂಲಕ ಇತರ ಪ್ರತಿಸ್ಪರ್ಧಿಗಳಿಗಿಂತ5 ಕೆಜಿ ಮುನ್ನಡೆ ಪಡೆದುಕೊಂಡಿದ್ದರು. ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 166 ಕೆಜಿ ಭಾರ ಎತ್ತುವ ಮೂಲಕ ಮೊದಲ ಪ್ರಯತ್ನದಲ್ಲೇ ಚಿನ್ನದ ಪದಕ ಭರವಸೆ ಮೂಡಿಸಿದರು. ಎರಡನೇ ಹಾಗೂ ಮೂರನೇ ಪ್ರಯತ್ನದಲ್ಲಿ ವಿಫಲಗೊಂಜ ಅಚಿಂತಾ, ಮೂರನೇ ಯತ್ನದಲ್ಲಿ 170 ಕೆಜಿ ಭಾರ ಎತ್ತಿದರು. ಇದು ಅಚಿಂತಾ ಚಿನ್ನದ ಪದಕ ಖಚಿತಪಡಿಸಿತು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ಹೊಸ ದಾಖಲೆ ಬರೆದ ಜೆರೆಮಿ ಲಾಲ್ರಿನ್ನುಂಗಾ!
2021ರಲ್ಲಿ ಅಚಿಂತಾ ವಿಶ್ವ ಜ್ಯೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ತಾಷ್ಕೆಂಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.
ಚಿನ್ನ ಗೆದ್ದ ಜೆರೆಮಿ ಲಾಲ್ರಿನುಂಗ
ಹಾಲಿ ಯುವ ಒಲಿಂಪಿಕ್ ಚಾಂಪಿಯನ್ ಜೆರೆಮಿ ಲಾಲ್ರಿನುಂಗ 22ನೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 2ನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಪುರುಷರ 67 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ 19 ವರ್ಷದ ಜೆರೆಮಿ ಒಟ್ಟು 300 ಕೆ.ಜಿ. ಭಾರ ಎತ್ತಿ ನೂತನ ಕೂಟ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದರು. ಸ್ನಾ್ಯಚ್‌ನಲ್ಲಿ 140 ಕೆ.ಜಿ. ಮತ್ತು ಕ್ಲೀನ್ ಅಂಡ್ ಜರ್ಕ್ನಲ್ಲಿ 160 ಕೆ.ಜಿ. ಭಾರ ಎತ್ತಿದ ಲಾಲ್ರಿನುಂಗ, ತಮ್ಮ ಹತ್ತಿರದ ಸ್ಪರ್ಧಿ ಸಮೊವಾದ ವೈಪಾವ ಲೊನ್(127 ಕೆ.ಜಿ.+166 ಕೆ.ಜಿ.) ವಿರುದ್ಧ 7 ಕೆ.ಜಿ. ಅಂತರದಲ್ಲಿ ಚಿನ್ನ ಜಯಿಸಿದರು. ನೈಜೀರಿಯಾದ ಎಡಿಡಿಯೊಂಗ್ ಉಮೊವಾಫಿಯಾ 290 ಕೆ.ಜಿ.(130 ಕೆ.ಜಿ.+160 ಕೆ.ಜಿ.) ಕಂಚಿನ ಪದಕ ಗೆದ್ದರು.
ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಬಿಂದ್ಯಾರಾಣಿ, ಭಾರತಕ್ಕೆ 4ನೇ ಪದಕ
ಮೊದಲ ಚಿನ್ನ ಗೆದ್ದ ಮೀರಾ ಬಾಯಿ ಚಾನು
ಒಲಿಂಪಿಕ್ಸ್ ಪದಕ ವಿಜೇತೆ, ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ 44 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಾನು ಒಟ್ಟು 201 ಕೆ.ಜಿ.(88 ಕೆ.ಜಿ. + 113 ಕೆ.ಜಿ.) ತೂಕ ಎತ್ತಿ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದರು. 2ನೇ ಸ್ಥಾನ ಪಡೆದ ಸ್ಪರ್ಧಿಗಿಂತ 29 ಕೆ.ಜಿ. ಹೆಚ್ಚು ತೂಕ ಎತ್ತಿ ಗಮನ ಸೆಳೆದರು.