ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧದ ಅನಿರೀಕ್ಷಿತ ಸೋಲು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಘಾತ ನೀಡಿತ್ತು. ಆದರೆ ಶ್ರೀಲಂಕಾ ವಿರುದ್ಧ ಭರ್ಜರಿ ಕಮ್‌ಬ್ಯಾಕ್ ಮಾಡಿದ ಭಾರತದ ವನಿತೆಯರು, ಇದೀಗ ಬದ್ಧವೈರಿ ಪಾಕಿಸ್ತಾನ ವಿರುದ್ಧ ಇತಿಹಾಸ ರಚಿಸಿದ್ದಾರೆ.
ಮಲೇಷಿಯಾ(ಜೂನ್.9): ಬದ್ಧವೈರಿ ಪಾಕಿಸ್ತಾನ ತಂಡವನ್ನ ಮಣಿಸೋ ಮೂಲಕ ಭಾರತ ಮಹಿಳಾ ತಂಡ ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಬಾಂಗ್ಲಾದೇಶ ವಿರುದ್ಧದ ಸೋಲಿನಿಂದ ಹತಾಶೆಗೊಂಡಿದ್ದ ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಇದೀಗ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಪಾಕಿಸ್ತಾನ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಭಾರತದ ಕರಾರುವಕ್ ಬೌಲಿಂಗ್ ದಾಳಿಯಿಂದ ಪಾಕ್ ತಂಡ ರನ್‌ಗಾಗಿ ಪರದಾಡಿತು. ಮೊದಲ ಓವರ್‌ನಲ್ಲೇ ನೈನ್ ಅಬಿದಿ ವಿಕೆಟ್ ಕಳೆದುಕೊಂಡಿತು.
ಸನಾ ಮಿರ್ ಸಿಡಿಸಿದ 20 ರನ್ ಪಾಕ್ ಪರ ವೈಯುಕ್ತಿಕ ಗರಿಷ್ಠ ಮೊತ್ತ. ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ಒಂದಂಕಿಗೆ ಪೆವಿಲಿಯನ್ ಸೇರಿದರು. ಈ ಮೂಲಕ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 72 ರನ್ ಸಿಡಿಸಿತು. ಭಾರತದ ಎಕ್ತಾ ಬಿಸ್ಟ್ 3 ವಿಕೆಟ್ ಪಡೆದು ಮಿಂಚಿದರು.
73 ರನ್ ಸುಲುಭ ಗುರಿ ಪಡೆದ ಭಾರತದ ಆರಂಭವೂ ಉತ್ತಮವಾಗಿರಲಿಲ್ಲ. ಮಿಥಾಲಿ ರಾಜ್ ಡಕೌಟ್ ಆಗೋ ಮೂಲಕ ಭಾರತದ ಆತಂಕ ಹೆಚ್ಚಿಸಿದರು. ಆದರೆ ಸ್ಮೃತಿ ಮಂದನಾ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆಯಾಟದಿಂದ ಭಾರತದ ಗೆಲುವಿನ ಹಾದಿ ಸುಗಮವಾಯಿತು.
ಮಂದನಾ 38 ರನ್ ಸಿಡಿಸಿದರೆ, ಕೌರ್ ಅಜೇಯ 34 ರನ್ ಸಿಡಿಸಿದರು. ಈ ಮೂಲಕ ಭಾರತ 16.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಭರ್ಜರಿ ಗೆಲುವಿನೊಂದಿಗೆ ಭಾರತದ ಮಹಿಳಾ ತಂಡ ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯ ಫೈನಲ್ ಪ್ರವೇಶಿಸಿದೆ.
