ಮೂರನೇ ಕ್ವಾರ್ಟರ್'ನಲ್ಲಿ ಸಕಾರಾತ್ಮಕವಾಗಿ ಆಟವಾಡಿದ ಭಾರತದ ವನಿತೆಯರು 33ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಅಂತರ(2-3)ವನ್ನು ಕಡಿಮೆ ಮಾಡಿದರು.

ನವದೆಹಲಿ(ಮೇ.20): ಭಾರತೀಯ ಮಹಿಳಾ ಹಾಕಿ ತಂಡದ ನಿರಾಶದಾಯಕ ಪ್ರದರ್ಶನ ಮತ್ತೆ ಮುಂದುವರೆದಿದ್ದು ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಪಂದ್ಯದಲ್ಲೂ 2-6 ಗೋಲುಗಳ ಅಂತರದಲ್ಲಿ ಸೋಲುಕಾಣುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದೂ ಗೆಲುವು ಕಾಣದೆ ಮುಖಭಂಗ ಅನುಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ಪಂದ್ಯದಲ್ಲಿ 1-4 ಗೋಲುಗಳಿಂದ ಪರಾಭವಗೊಂಡಿದ್ದ ತಂಡ, 2ನೇ ಪಂದ್ಯದಲ್ಲಿ 2-8 ಗೋಲುಗಳ ಹೀನಾಯ ಸೋಲು ಅನುಭವಿಸಿತ್ತು. 3ನೇ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ್ದ ತಂಡ 2-3 ಗೋಲುಗಳಿಂದ ಕಿವೀಸ್ ವಿರುದ್ಧ ಪ್ರಬಲ ಪೈಪೋಟಿ ನೀಡಿ ಸೋಲೊಪ್ಪಿಕೊಂಡಿತು. ನಾಲ್ಕನೇ ಪಂದ್ಯದಲ್ಲಿ 0-3 ಗೋಲುಗಳ ಅಂತರದ ಸೋಲು ಕಂಡರೆ, ಅಂತಿಮ ಪಂದ್ಯದಲ್ಲಿ 2-6 ಗೋಲುಗಳ ಅಂತರದ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದೆ.

ಓಲಿವಿಯಾ ಮೇರಿ (4ನೇ ನಿ. ಹಾಗೂ 15ನೇ ನಿ.)ಗೋಲು ಬಾರಿಸುವ ಮೂಲಕ 2-0 ಕಿವೀಸ್ ಪರ ಮೊದಲ ಕ್ವಾರ್ಟರ್'ನಲ್ಲಿ ಮುನ್ನಡೆ ತಂದುಕೊಟ್ಟರು. ಇನ್ನು ಎರಡನೇ ಕ್ವಾರ್ಟರ್'ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಟೀಂ ಇಂಡಿಯಾ ಆಟಗಾರ್ತಿಯರು 22ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡರು. ದೀಪ್ ಗ್ರೇಸ್ ಎಕ್ಕಾ ಭಾರತದ ಪರ ಮೊದಲ ಗೋಲು ತಂದಿತ್ತರು. ಇದಾದ ಕೆಲಹೊತ್ತಿನಲ್ಲೇ ನ್ಯೂಜಿಲ್ಯಾಂಡ್ ಆಟಗಾರ್ತಿ ಪಿಪ್ಪಾ ಹೇವಾರ್ಡ್ ಗೋಲು ಬಾರಿಸಿ ಎರಡನೇ ಕ್ವಾರ್ಟರ್ ಮುಕ್ತಾಯದ ವೇಳೆಗೆ ನ್ಯೂಜಿಲ್ಯಾಂಡ್ 3-1 ಗೋಲುಗಳ ಮುನ್ನೆಡೆ ಸಾಧಿಸಿತು.

ಮೂರನೇ ಕ್ವಾರ್ಟರ್'ನಲ್ಲಿ ಸಕಾರಾತ್ಮಕವಾಗಿ ಆಟವಾಡಿದ ಭಾರತದ ವನಿತೆಯರು 33ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಅಂತರ(2-3)ವನ್ನು ಕಡಿಮೆ ಮಾಡಿದರು. ಆದರೆ ಆನಂತರ ಬಲಿಷ್ಟ ಆಟವಾಡಿದ ನ್ಯೂಜಿಲ್ಯಾಂಡ್ ಆಟಗಾರ್ತಿಯರು ಸತತ ಮೂರು ಗೋಲು ದಾಖಲಿಸಿ ಐದನೇ ಪಂದ್ಯದಲ್ಲೂ ಪ್ರಾಬಲ್ಯ ಮೆರೆದರು.