ಮುಂಬೈ[ಫೆ.23]: 25 ರನ್‌ಗೆ ಕೊನೆ 7 ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ ಮಹಿಳಾ ತಂಡ, ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 66 ರನ್‌ಗಳ ಸೋಲು ಅನುಭವಿಸಿತು. ಭರ್ಜರಿ ಗೆಲುವುನೊಂದಿಗೆ ಮಿಥಾಲಿ ರಾಜ್‌ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. ಐಸಿಸಿ ಏಕದಿನ ವಿಶ್ವಚಾಂಪಿಯನ್‌ಶಿಪ್‌ನ ಭಾಗವಾಗಿರುವ ಈ ಸರಣಿ ಜಯಿಸಿದರೆ, 2021ರ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಅನುಕೂಲವಾಗಲಿದೆ.

ಮೊದಲು ಬ್ಯಾಟ್‌ ಮಾಡಿದ ಭಾರತ 49.4 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲೌಟ್‌ ಆಯಿತು. ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 38 ರನ್‌ಗೆ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ ಹೊರತಾಗಿಯೂ ನಾಯಕಿ ಹೀಥರ್‌ ನೈಟ್‌ (39), ನತಾಲಿ ಶೀವರ್‌ (44) ಆಕರ್ಷಕ ಜೊತೆಯಾಟದ ನೆರವಿನಿಂದ ಚೇತರಿಸಿಕೊಂಡಿತು. ಇವರಿಬ್ಬರ ನಡುವಿನ 73 ರನ್‌ಗಳ ಜೊತೆಯಾಟವನ್ನು ಮುರಿಯುತ್ತಿದ್ದಂತೆ ಪಂದ್ಯ ಭಾರತದ ಹಿಡಿತಕ್ಕೆ ಸಿಕ್ಕಿತು. 111 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌, 136ಕ್ಕೆ ಆಲೌಟ್‌ ಅಯಿತು. ಏಕ್ತಾ ಬಿಷ್ತಾ 4, ಶಿಖಾ ಹಾಗೂ ದೀಪ್ತಿ ತಲಾ 2 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿಸಲ್ಪಟ್ಟ ಭಾರತ, ಜೆಮಿಮಾ ರೋಡ್ರಿಗಸ್‌ (48), ಮಿಥಾಲಿ ರಾಜ್‌ (44) ಹಾಗೂ ಕೊನೆಯಲ್ಲಿ ಜೂಲನ್‌ ಗೋಸ್ವಾಮಿ (30) ರನ್‌ ಕೊಡುಗೆಯ ನೆರವಿನಿಂದ ಸ್ಪರ್ಧಾತಕ ಮೊತ್ತ ಕಲೆಹಾಕಿತು.

ಸ್ಕೋರ್‌: ಭಾರತ 202/10 (ಜೆಮಿಮಾ 48, ಮಿಥಾಲಿ 44, ಎಕ್ಲೆಸ್ಟೋನ್‌ 2-27)
 ಇಂಗ್ಲೆಂಡ್‌ 136/10 (ಸೀವರ್‌ 44, ನೈಟ್‌ 39, ಏಕ್ತಾ 4-25). 
ಪಂದ್ಯ ಶ್ರೇಷ್ಠ: ಏಕ್ತಾ ಬಿಷ್ತಾ