ಈ ಹಿಂದೆ, 2012ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಪಂದ್ಯಾವಳಿಯ ಚೊಚ್ಚಲ ಆವೃತ್ತಿಯಲ್ಲಿ ಕಪ್ ಗೆದ್ದಿದ್ದ ಭಾರತ, 2014ರಲ್ಲಿ ಯುಎಇನಲ್ಲಿ ನಡೆದಿದ್ದ ದ್ವಿತೀಯ ಆವೃತ್ತಿಯಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಕೊಲಂಬೊ(ಡಿ.23): ಆರಂಭಿಕ ಹಿಮಾಂಶು ರಾಣಾ ಹಾಗೂ ನಾಯಕ ಅಭಿಷೇಕ್ ಶರ್ಮಾ ಅವರ ಕೈಚಳಕದಿಂದಾಗಿ ಭಾರತ, 19 ವರ್ಷದೊಳಗಿನವರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 34 ರನ್ ಅಂತರದ ಜಯ ಗಳಿಸುವುದರೊಂದಿಗೆ ಸತತ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಹಿಂದೆ, 2012ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಪಂದ್ಯಾವಳಿಯ ಚೊಚ್ಚಲ ಆವೃತ್ತಿಯಲ್ಲಿ ಕಪ್ ಗೆದ್ದಿದ್ದ ಭಾರತ, 2014ರಲ್ಲಿ ಯುಎಇನಲ್ಲಿ ನಡೆದಿದ್ದ ದ್ವಿತೀಯ ಆವೃತ್ತಿಯಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಿರಿಯರ ಅಂತಿಮ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿತು. ಈ ಸವಾಲನ್ನು ಬೆನ್ನಟ್ಟಿದ ಶ್ರೀಲಂಕಾ, 48.4 ಓವರ್‌ಗಳಲ್ಲಿ 239 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು. ಭಾರತ ತಂಡದ ನಾಯಕ ಅಭಿಷೇಕ್ ಶರ್ಮಾ ಪಂದ್ಯ ಶ್ರೇಷ್ಠ ಗೌರವ ಪಡೆದರೆ, ಆರಂಭಿಕ ಆಟಗಾರ ಹಿಮಾಂಶು ರಾಣಾ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.

ಏಷ್ಯಾದಲ್ಲಿ ಸಾರ್ವಭೌಮತ್ವ

ಇದೇ ವರ್ಷ ಮಾರ್ಚ್ 6ರಂದು ನಡೆದಿದ್ದ ಹಿರಿಯರ ಏಷ್ಯಾ ಕಪ್ ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ನೇತೃತ್ವದ ಭಾರತ ತಂಡ, ಬಾಂಗ್ಲಾದೇಶ ವಿರುದ್ಧ 8 ವಿಕೆಟ್ ಜಯ ಸಾಸಿ ಪ್ರಶಸ್ತಿಗೆ ಭಾಜನವಾಗಿತ್ತು. ಇದೇ ತಿಂಗಳ 4ರಂದು ನಡೆದಿದ್ದ ಮಹಿಳೆಯರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 17 ರನ್ ಅಂತರದಲ್ಲಿ ಮಣಿಸಿದ್ದ ಹರ್ಮನ್ ಕೌರ್ ನೇತೃತ್ವದ ಭಾರತ ವನಿತೆಯರ ತಂಡ ಪ್ರಶಸ್ತಿ ಬಾಚಿತ್ತು. ಇದೀಗ, ಕಿರಿಯರ ತಂಡವೂ ಇದೇ ಹಾದಿಯಲ್ಲಿ ಸಾಗುವ ಮೂಲಕ ಏಷ್ಯಾ ಮಟ್ಟದ ಕ್ರಿಕೆಟ್‌ನಲ್ಲಿ ಭಾರತ ಮತ್ತೊಮ್ಮೆ ತನ್ನ ಸಾರ್ವಭೌಮತ್ವವನ್ನು ಸಾಬೀತುಪಡಿಸಿದಂತಾಗಿದೆ.