ಲಖನೌ(ನ.06): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಆರಂಭಿಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್‌ಗೆ 123 ರನ್ ಜೊತೆಯಾಟ ನೀಡಿದ್ದಾರೆ.

ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ನಾಯಕ ರೋಹಿತ್ ಶರ್ಮಾ 2ನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಾರೆ. ರೋಹಿತ್ 11 ರನ್ ಪೂರೈಸುತ್ತಿದ್ದಂತೆ, ನಾಯಕ ವಿರಾಟ್ ಕೊಹ್ಲಿ ದಾಖಲೆ ಪುಡಿ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಗರಿಷ್ಠ ರನ್ ಸಿಡಿಸಿದ ಭಾರತೀಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. 

ವಿರಾಟ್ ಕೊಹ್ಲಿ 62 ಪಂದ್ಯಗಳಿಂದ 2102 ರನ್ ಸಿಡಿಸಿದ್ದಾರೆ. ರೋಹಿತ್ ಶರ್ಮಾ 86 ಪಂದ್ಯಗಳಿಂದ ಈ ಗಡಿ ದಾಟಿದ್ದಾರೆ. ಇನ್ನು ಶಿಖರ್ ಧವನ್ ಕೂಡ ಅರ್ಧಶತಕದ  ಸನಿಹದಲ್ಲಿ ಔಟಾಗಿದ್ದಾರೆ. ಧವನ್ 43 ರನ್ ಸಿಡಿಸಿ ಔಟಾದರು. 

ಈ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಕಳೆದ ಪಂದ್ಯದಲ್ಲಿ ದುಬಾರಿಯಾದ ವೇಗಿ ಉಮೇಶ್ ಯಾದವ್ ಬದಲು ಭುವನೇಶ್ವರ್ ಕುಮಾರ್‌ಗೆ ಸ್ಥಾನ ನೀಡಲಾಗಿದೆ. ಇನ್ನುಳಿದಂತೆ ಯಾವುದೇ ಬದಲಾವಣೆ ಮಾಡಿಲ್ಲ. ವೆಸ್ಟ್ ಇಂಡೀಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ನಿಕೋಲಾಸ್ ಪೂರನ್ ಅವಕಾಶ ಪಡೆದಿದ್ದಾರೆ.