ನಾರ್ಥ್ ಸೌಂಡ್‌(ಆ್ಯಂಟಿಗಾ)ಆ.22: ಟೆಸ್ಟ್‌ ವಿಶ್ವಕಪ್‌ ಎಂದೇ ಕರೆಸಿಕೊಳ್ಳುತ್ತಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮೊದಲ ಪಂದ್ಯವನ್ನಾಡಲು ಸಿದ್ಧಗೊಂಡಿದೆ. ಗುರುವಾರದಿಂದ ಇಲ್ಲಿನ ಸರ್‌.ವಿವ್‌ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧದ 2 ಪಂದ್ಯಗಳ ಸರಣಿಯ ಮೊದಲ ಪಂದ್ಯ ಆರಂಭ ಆರಂಭಗೊಳ್ಳಲಿದ್ದು, ಪರಿಪೂರ್ಣ ತಂಡ ಸಂಯೋಜನೆ ಹಾಗೂ ಗೆಲುವಿನ ಆರಂಭ ನಾಯಕ ವಿರಾಟ್‌ ಕೊಹ್ಲಿಯ ಗುರಿಯಾಗಿದೆ.

ಇದನ್ನೂ ಓದಿ: ಅಲುಗಾಡುತ್ತಿದೆ ರಿಕಿ ಪಾಂಟಿಂಗ್ ದಾಖಲೆ; ಹೊಸ ಇತಿಹಾಸಕ್ಕೆ ಸಜ್ಜಾದ ಕೊಹ್ಲಿ!

ಈ ಪಂದ್ಯದಲ್ಲಿ ಭಾರತ ಗೆದ್ದರೆ, ಕೊಹ್ಲಿ ನಾಯಕತ್ವದಲ್ಲಿ ತಂಡಕ್ಕೆ 27ನೇ ಗೆಲುವಾಗಲಿದ್ದು, ಅತಿಹೆಚ್ಚು ಗೆಲುವು ಕಂಡ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಧೋನಿ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಮೇಲ್ನೋಟಕ್ಕೆ ಭಾರತ ತಂಡ ಅತ್ಯಂತ ಬಲಿಷ್ಠವಾಗಿ ತೋರುತ್ತಿದೆ. ಕೊಹ್ಲಿ, ಚೇತೇಶ್ವರ್‌ ಪೂಜಾರ, ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ, ರಿಷಭ್‌ ಪಂತ್‌, ಅಜಿಂಕ್ಯ ರಹಾನೆಯಂತಹ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಬಲ ತಂಡಕ್ಕಿದೆ. ಭಾರತದ ಬೌಲಿಂಗ್‌ ಪಡೆ ಯಾವುದೇ ಎದುರಾಳಿಯ ಮನದಲ್ಲಿ ನಡುಕ ಹುಟ್ಟಿಸುವ ಸಾಮರ್ಥ್ಯ ಹೊಂದಿದೆ. ಆದರೆ ಜೇಸನ್‌ ಹೋಲ್ಡರ್‌ ನೇತೃತ್ವದ ವಿಂಡೀಸ್‌ ತಂಡವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ವಿಂಡೀಸ್‌ ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಚಾನ್ಸ್..?

ಕೆರಿಬಿಯನ್‌ ದ್ವೀಪಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡ ಸ್ಪರ್ಧಾತ್ಮಕ ಪಿಚ್‌ಗಳಲ್ಲಿ ಇಂಗ್ಲೆಂಡ್‌ ತಂಡ ಪರದಾಡಿತ್ತು. ಏಕದಿನ ವಿಶ್ವಕಪ್‌ಗೂ ಮುನ್ನ ವಿಂಡೀಸ್‌ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್‌, 1-2ರ ಅಂತರದಲ್ಲಿ ಸರಣಿ ಸೋತಿತ್ತು. ತವರಿನಲ್ಲಿ ವಿಂಡೀಸ್‌ ಪಡೆ ಅನಿರೀಕ್ಷಿತ ಪ್ರದರ್ಶನಗಳನ್ನು ನೀಡುವುದರಲ್ಲಿ ಎತ್ತಿದ ಕೈ. ಅಲ್ಲದೇ ಟಿ20, ಏಕದಿನ ಸರಣಿಗಳನ್ನು ಸೋತಿರುವ ವಿಂಡೀಸ್‌, ಟೆಸ್ಟ್‌ ಸರಣಿಯಲ್ಲಾದರೂ ಗೆಲುವು ಸಾಧಿಸುವ ಕನಸು ಕಾಣುತ್ತಿದೆ.

ಬ್ಯಾಟಿಂಗ್‌ ಕ್ರಮಾಂಕದಲ್ಲಿ ಒಂದೆರಡು ಸ್ಥಾನಗಳ ಬಗ್ಗೆ ಗೊಂದಲವಿದೆ. ಮಯಾಂಕ್‌ ಅಗರ್‌ವಾಲ್‌ ಜತೆ ಇನ್ನಿಂಗ್ಸ್‌ ಆರಂಭಿಸುವ ಅವಕಾಶ ಕೆ.ಎಲ್‌.ರಾಹುಲ್‌ಗೆ ಸಿಗುತ್ತದೆಯೋ, ಹನುಮ ವಿಹಾರಿಗೆ ಸಿಗುತ್ತದೆಯೋ ಎನ್ನುವ ಪ್ರಶ್ನೆ ಎದ್ದಿದೆ. ಭಾರತ ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದರೆ, ರೋಹಿತ್‌ ಶರ್ಮಾ ಇಲ್ಲವೇ ಅಜಿಂಕ್ಯ ರಹಾನೆ ಇಬ್ಬರಲ್ಲಿ ಒಬ್ಬರು ಹೊರಗುಳಿಯಬೇಕಾಗುತ್ತದೆ. ಮೂವರು ವೇಗಿಗಳು, ಒಬ್ಬ ಸ್ಪಿನ್ನರ್‌ನೊಂದಿಗೆ ಆಡಲು ನಿರ್ಧರಿಸಿದರೆ ಮುಂಬೈನ ಇಬ್ಬರು ತಾರಾ ಆಟಗಾರರಿಗೂ ಸ್ಥಾನ ಸಿಗಲಿದೆ.

ಬೂಮ್ರಾ ಮೇಲೆ ನಿರೀಕ್ಷೆ: ಬೌಲಿಂಗ್‌ ಪಡೆಯನ್ನು ಜಸ್‌ಪ್ರೀತ್‌ ಬೂಮ್ರಾ ಮುನ್ನಡೆಸಲಿದ್ದು, ಅವರ ಮೇಲೆ ತಂಡ ಹೆಚ್ಚು ವಿಶ್ವಾಸವಿರಿಸಿದೆ. ಮೊಹಮದ್‌ ಶಮಿ, ಇಶಾಂತ್‌ ಶರ್ಮಾ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಇಲ್ಲಿನ ಪಿಚ್‌ ವೇಗಿಗಳಿಗೆ ಹೆಚ್ಚು ನೆರವು ನೀಡಲಿರುವ ಕಾರಣ, 4ನೇ ವೇಗಿಯಾಗಿ ಉಮೇಶ್‌ ಯಾದವ್‌ರನ್ನು ಕಣಕ್ಕಿಳಿಸಿದರೆ ಅಚ್ಚರಿಯಿಲ. ಸ್ಪಿನ್ನರ್‌ಗಳಾದ ಆರ್‌.ಅಶ್ವಿನ್‌, ಕುಲ್ದೀಪ್‌ ಯಾದವ್‌ ಹಾಗೂ ರವೀಂದ್ರ ಜಡೇಜಾ ನಡುವೆ ಸ್ಪರ್ಧೆ ಇದೆ.

ವಿಂಡೀಸ್‌ಗೆ ಯುವಕರ ಬಲ: ವಿಂಡೀಸ್‌ ತಂಡ ಪ್ರತಿಭಾನ್ವಿತ ಅಟಗಾರರಿಗೆ ಕೂಡಿದೆ. ಶಾಯ್‌ ಹೋಪ್‌, ಜಾನ್‌ ಕ್ಯಾಂಬೆಲ್‌, ಶಿಮ್ರೊನ್‌ ಹೆಟ್ಮೇಯರ್‌ರಂತಹ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ. ಡರೆನ್‌ ಬ್ರಾವೋ ತಂಡದಲ್ಲಿರುವ ಅತ್ಯಂತ ಅನುಭವಿ ಬ್ಯಾಟ್ಸ್‌ಮನ್‌. 2016ರಲ್ಲಿ ಭಾರತ ವಿಂಡೀಸ್‌ ಪ್ರವಾಸ ಕೈಗೊಂಡಿದ್ದಾಗ ರೋಸ್ಟನ್‌ ಚೇಸ್‌, ಕಿಂಗ್‌ಸ್ಟನ್‌ ಟೆಸ್ಟ್‌ನ 5ನೇ ದಿನ, ಇಡೀ ದಿನ ಬ್ಯಾಟ್‌ ಮಾಡಿ ಭಾರತಕ್ಕೆ ಇನ್ನಿಂಗ್ಸ್‌ ಗೆಲುವು ಕೈತಪ್ಪುವಂತೆ ಮಾಡಿದ್ದರು. ಟೆಸ್ಟ್‌ನಲ್ಲಿ 50 ವಿಕೆಟ್‌ ಪಡೆದಿರುವ ಚೇಸ್‌, ವಿಂಡೀಸ್‌ನ ತಾರಾ ಆಲ್ರೌಂಡರ್‌ ಎನಿಸಿದ್ದಾರೆ. ವೇಗಿಗಳಾದ ಕೀಮಾರ್‌ ರೋಚ್‌, ಶ್ಯಾನನ್‌ ಗೇಬ್ರಿಯಲ್‌ ಹಾಗೂ ಜೇಸನ್‌ ಹೋಲ್ಡರ್‌ ತಮ್ಮ ಸ್ವಿಂಗ್‌ ದಾಳಿಯಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲರು. ಮೊದಲ ಪಂದ್ಯ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸಿದೆ.

ತಂಡಗಳು
ಭಾರತ: ವಿರಾಟ್‌ ಕೊಹ್ಲಿ(ನಾಯಕ), ಮಯಾಂಕ್‌ ಅಗರ್‌ವಾಲ್‌, ರಾಹುಲ್‌, ಚೇತೇಶ್ವರ್‌ ಪೂಜಾರ, ಹನುಮ ವಿಹಾರಿ, ಅಜಿಂಕ್ಯ ರಹಾನೆ, ರೋಹಿತ್‌, ರಿಷಭ್‌ ಪಂತ್‌, ಸಾಹ, ಅಶ್ವಿನ್‌, ಕುಲ್ದೀಪ್‌ ಯಾದವ್‌, ರವೀಂದ್ರ ಜಡೇಜಾ, ಇಶಾಂತ್‌ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ, ಭುವನೇಶ್ವರ್‌.

ವಿಂಡೀಸ್‌: ಜೇಸನ್‌ ಹೋಲ್ಡರ್‌(ನಾಯಕ), ಕ್ರೇಗ್‌ ಬ್ರಾಥ್‌ವೇಟ್‌, ಡರೆನ್‌ ಬ್ರಾವೋ, ಶಮಾರ್‌್ಹ ಬ್ರೂಕ್ಸ್‌, ಜಾನ್‌ ಕ್ಯಾಂಬೆಲ್‌, ರೋಸ್ಟನ್‌ ಚೇಸ್‌, ರಕ್‌ಹೀಮ್‌ ಕಾರ್ನ್‌ವಾಲ್‌, ಶೇನ್‌ ಡೌರಿಚ್‌, ಶ್ಯಾನನ್‌ ಗೇಬ್ರಿಯಲ್‌, ಶಿಮ್ರೊನ್‌ ಹೆಟ್ಮೇಯರ್‌, ಶಾಯ್‌ ಹೋಪ್‌, ಕೀಮೋ ಪೌಲ್‌, ಕೀಮಾರ್‌ ರೋಚ್‌.

ಪಂದ್ಯ ಆರಂಭ: ಸಂಜೆ 7ಕ್ಕೆ

ಪಿಚ್‌ ರಿಪೋರ್ಟ್‌
ಸರ್‌ ವಿವ್‌ ರಿಚರ್ಡ್ಸ್ ಕ್ರೀಡಾಂಗಣದ ಪಿಚ್‌ ವೇಗದ ಬೌಲಿಂಗ್‌ಗೆ ಸಹಕಾರ ನೀಡಲಿದ್ದು, ಎರಡೂ ತಂಡಗಳು ಹೆಚ್ಚುವರಿ ಬೌಲರ್‌ ಆಡಿಸುವ ಸಾಧ್ಯತೆ ಇದೆ. ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಕಡಿಮೆ ಎನ್ನುವ ಲೆಕ್ಕಾಚಾರವಿದೆ.

ಒಟ್ಟು ಮುಖಾಮುಖಿ: 96
ಭಾರತ: 20
ವಿಂಡೀಸ್‌: 30
ಡ್ರಾ: 46

ಸಂಖ್ಯೆಯುಳ್ಳ ಜೆರ್ಸಿ ತೊಡಲಿರುವ ಆಟಗಾರರು!
ಏಕದಿನ, ಟಿ20ಯಂತೆ ಟೆಸ್ಟ್‌ ಕ್ರಿಕೆಟ್‌ನಲ್ಲೂ ಆಟಗಾರರು ಸಂಖ್ಯೆಯುಳ್ಳ ಜೆರ್ಸಿಗಳನ್ನು ತೊಡಲಿದ್ದಾರೆ. ಭಾರತೀಯ ಆಟಗಾರರು ತಮ್ಮ ಸೀಮಿತ ಓವರ್‌ ಜೆರ್ಸಿ ಸಂಖ್ಯೆಯನ್ನೇ ಉಳಿಸಿಕೊಂಡಿದ್ದಾರೆ.

ಭಾರತಕ್ಕೆ ಕ್ಲೀನ್‌ ಸ್ವೀಪ್‌ ಗುರಿ
ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸರಣಿಯನ್ನು ಆಡಲಿರುವ ಭಾರತ, ಸರಣಿ ಕ್ಲೀನ್‌ ಸ್ವೀಪ್‌ ಮಾಡಿದರೆ 120 ಅಂಕ ಸಿಗಲಿದೆ. 2 ಪಂದ್ಯಗಳ ಸರಣಿಯಲ್ಲಿ ಪ್ರತಿ ಜಯಕ್ಕೆ 60 ಅಂಕ ದೊರೆಯಲಿದೆ. ಚಾಂಪಿಯನ್‌ಶಿಪ್‌ನಲ್ಲಿ ಮುಂದಿನ 2 ವರ್ಷ ಪ್ರತಿ ತಂಡ 6 ಸರಣಿಗಳನ್ನು ಆಡಲಿದೆ. ತವರಿನಲ್ಲಿ 3, ತವರಿನಾಚೆ 3 ಸರಣಿಗಳಲ್ಲಿ ಪಾಲ್ಗೊಳ್ಳಲಿದೆ. ಅಗ್ರ 9 ತಂಡಗಳ ಪೈಕಿ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವೇಳಾಪಟ್ಟಿಇಂತಿದೆ.

ಪಾದಾರ್ಪಣೆ ನಿರೀಕ್ಷೆಯಲ್ಲಿ ‘ಕಿಂಗ್‌ ಕಾಂಗ್‌’ ಕ್ರಿಕೆಟಿಗ!
ಭಾರತ-ವಿಂಡೀಸ್‌ ಮೊದಲ ಟೆಸ್ಟ್‌ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಬಹುದು. ಆಜಾನುಬಾಹು ರಕ್‌ಹೀಮ್‌ ಕಾರ್ನ್‌ವೆಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ. 6 ಅಡಿ 6 ಇಂಚು ಎತ್ತರ, 140 ಕೆ.ಜಿ ತೂಕವಿರುವ ಕಾರ್ನ್‌ವೆಲ್‌ರನ್ನು ಸರಣಿಗೆ ಆಯ್ಕೆ ಮಾಡಲಾಗಿದೆ. ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿರುವ ಕಾರ್ನ್‌ವೆಲ್‌, ಆಫ್‌ ಬ್ರೇಕ್‌ ಬೌಲಿಂಗ್‌ ಸಹ ಮಾಡುತ್ತಾರೆ. 55 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ರಕ್‌ಹೀಮ್‌, 1 ಶತಕ, 13 ಅರ್ಧಶತಕಗಳೊಂದಿಗೆ 2224 ರನ್‌ ಗಳಿಸಿದ್ದಾರೆ. 260 ವಿಕೆಟ್‌ ಸಹ ಕಬಳಿಸಿದ್ದಾರೆ. ರಕ್‌ಹೀಮ್‌ ಕಣಕ್ಕಿಳಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಅತಿಹೆಚ್ಚು ತೂಕವಿರುವ ಆಟಗಾರ ಎನಿಸಿಕೊಳ್ಳಲಿದ್ದಾರೆ.