ವಿಂಡೀಸ್ ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಚಾನ್ಸ್..?
ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಆಗಸ್ಟ್ 22ರಿಂದ ಆರಂಭವಾಗಲಿರುವ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಬಹುದು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...
ಆ್ಯಂಟಿಗಾ(ಆ.21): ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಆರಂಭಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯವನ್ನಾಡಲು ಭಾರತ ತಂಡ ಉತ್ಸುಕಗೊಂಡಿದ್ದು, ನಾಯಕ ವಿರಾಟ್ ಕೊಹ್ಲಿ ಹಾಗೂ ಮತ್ತೊಂದು ಅವಧಿಗೆ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿರುವ ರವಿಶಾಸ್ತ್ರಿಗೆ ಆಟಗಾರರ ಆಯ್ಕೆ ಗೊಂದಲ ಶುರುವಾಗಿದೆ.
ವಿಂಡೀಸ್ ‘ಎ’ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬಹುತೇಕ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ತಂಡದ ಎಲ್ಲಾ ಆಟಗಾರರು ಉತ್ತಮ ಲಯದಲ್ಲಿರುವುದು ನಾಯಕ ಕೊಹ್ಲಿಗೆ ಖುಷಿ ನೀಡಿದೆಯಾದರೂ, ತಲೆನೋವು ಸಹ ಹೆಚ್ಚಾಗಿದೆ.
ಟೀಂ ಇಂಡಿಯಾ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ
ಹೇಗಿರಲಿದೆ ಬ್ಯಾಟಿಂಗ್ ಪಡೆ?
ಆರಂಭಿಕರ ಸ್ಥಾನಕ್ಕೆ ಕರ್ನಾಟಕದ ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್.ರಾಹುಲ್ ಇದ್ದಾರೆ. ಆದರೆ ಆಸ್ಪ್ರೇಲಿಯಾದಲ್ಲಿ ಕೊನೆ 2 ಟೆಸ್ಟ್‌ಗಳಿಗೆ ರಾಹುಲ್‌ರನ್ನು ಕೈಬಿಡಲಾಗಿತ್ತು ಎನ್ನುವುದನ್ನು ಮರೆಯುವ ಹಾಗಿಲ್ಲ. ಹನುಮ ವಿಹಾರಿ ಇನಿಂಗ್ಸ್ ಆರಂಭಿಸಿದ್ದರು. ಅವರು ಹೆಚ್ಚು ರನ್ ಗಳಿಸದಿದ್ದರೂ, ಹೊಸ ಚೆಂಡಿನ ಹೊಳಪು ತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಮಯಾಂಕ್ ಹಾಗೂ ಚೇತೇಶ್ವರ್ ಪೂಜಾರಗೆ ರನ್ ಗಳಿಸಲು ಸುಲಭವಾಗಿತ್ತು. ಅಭ್ಯಾಸ ಪಂದ್ಯದಲ್ಲಿ ವಿಹಾರಿ 3ನೇ ಕ್ರಮಾಂಕದಲ್ಲಿ ಆಡಿದ್ದನ್ನು ನೋಡಿದರೆ, ಮೊದಲ ಟೆಸ್ಟ್‌ನಲ್ಲಿ ಅವರಿಗೆ ಆರಂಭಿಕನ ಸ್ಥಾನ ಸಿಗಬಹುದು.
ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಭಾರತಕ್ಕೆ ನಂ.1 ಸ್ಥಾನ ಉಳ್ಳಿಸಿಕೊಳ್ಳುವ ಒತ್ತಡ!
3ನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, 4ನೇ ಕ್ರಮಾಂಕದಲ್ಲಿ ವಿರಾಟ್ ಆಡಲಿದ್ದಾರೆ. 5ನೇ ಕ್ರಮಾಂಕಕ್ಕೆ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಸೀಮಿತ ಓವರ್ ತಂಡದ ಉಪನಾಯಕ ರೋಹಿತ್ ಶರ್ಮಾ ನಡುವೆ ಪೈಪೋಟಿ ಏರ್ಪಟ್ಟಿದೆ. ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಅರ್ಧಶತಕ ಬಾರಿಸಿದರೆ, 2ನೇ ಇನ್ನಿಂಗ್ಸ್‌ನಲ್ಲಿ ರಹಾನೆ ಅರ್ಧಶತಕ ಗಳಿಸಿದರು. 6ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡಲಿದ್ದು, ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಆಲ್ರೌಂಡರ್ ಸ್ಥಾನವನ್ನು ರವೀಂದ್ರ ಜಡೇಜಾಗೆ ನೀಡುವ ನಿರೀಕ್ಷೆ ಇದೆ.
ಬೌಲಿಂಗ್ ಪಡೆಯಲ್ಲಿ ಯಾರ್ಯಾರು?
ರೋಹಿತ್ ಹಾಗೂ ರಹಾನೆ ಇಬ್ಬರನ್ನೂ ಆಡಿಸಿದರೆ ಕೇವಲ ನಾಲ್ವರು ಬೌಲರ್‌ಗಳೊಂದಿಗೆ ಆಡಬೇಕಾಗುತ್ತದೆ. ಆಗ ಜಡೇಜಾಗೆ ಅವಕಾಶ ಕೈತಪ್ಪಲಿದೆ. ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ಇಶಾಂತ್ ಶರ್ಮಾ ಜತೆಗೆ ಆರ್.ಅಶ್ವಿನ್ ಇಲ್ಲವೇ ಕುಲ್ದೀಪ್ ಯಾದವ್ ಕಣಕ್ಕಿಳಿಯಲಿದ್ದಾರೆ. ಹನುಮ ವಿಹಾರಿ 5ನೇ ಬೌಲರ್ ಜವಾಬ್ದಾರಿ ಹೊರಬೇಕು. ಆದರೆ ಕೊಹ್ಲಿ ಐವರು ಬೌಲರ್‌ಗಳೊಂದಿಗೆ ಆಡಲು ಹೆಚ್ಚು ಒಲವು ಹೊಂದಿದ್ದಾರೆ. ಬೌಲರ್‌ಗಳು 20 ವಿಕೆಟ್ ಕಬಳಿಸಿದರಷ್ಟೇ ಪಂದ್ಯ ಗೆಲ್ಲಲು ಸಾಧ್ಯ. ಬೌಲರ್‌ಗಳು ಯಶಸ್ಸಿನ ರೂವಾರಿಗಳು ಎಂದು ವಿರಾಟ್ ಹಲವು ಸನ್ನಿವೇಶಗಳಲ್ಲಿ ಹೇಳಿದ್ದಾರೆ. ಪಿಚ್ ಹಾಗೂ ಸ್ಥಳೀಯ ವಾತಾವರಣ ಬೌಲಿಂಗ್ ಸ್ನೇಹಿಯಾಗಿದ್ದರೆ, ನಾಲ್ಕನೇ ವೇಗಿಯಾಗಿ ಉಮೇಶ್ ಯಾದವ್‌ರನ್ನು ಆಡಿಸುವ ಲೆಕ್ಕಾಚಾರವೂ ಇದೆ. ಆಗ ಕೇವಲ ಒಬ್ಬ ಸ್ಪಿನ್ನರ್‌ಗೆ ಮಾತ್ರ ಸ್ಥಾನ ಸಿಗಲಿದೆ.
ಭಾರತ ತಂಡ ಕೇವಲ ನಾಲ್ವರು ಬೌಲರ್‌ಗಳೊಂದಿಗೆ ಆಡಿದರೂ 20 ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದೆ ಎನ್ನುವ ಅಭಿಪ್ರಾಯವಿದೆ. ಆದರೆ ವಿಶ್ವ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲೇ ಕೊಹ್ಲಿ ಪ್ರಯೋಗಕ್ಕೆ ಕೈಹಾಕುತ್ತಾರಾ ಎನ್ನುವ ಪ್ರಶ್ನೆ ಕಾಡದೆ ಇರುವುದಿಲ್ಲ.