ನವದೆಹಲಿ[ಆ.20]: ವೆಸ್ಟ್‌ಇಂಡೀಸ್‌ ವಿರುದ್ಧ ಟಿ20, ಏಕದಿನ ಸರಣಿ ಗೆದ್ದಿರುವ ಭಾರತ ತಂಡ, ಟೆಸ್ಟ್‌ ಸರಣಿಯನ್ನೂ ವಶಪಡಿಸಿಕೊಳ್ಳುವ ಗುರಿ ಹೊಂದಿದೆ. ಅದಕ್ಕಾಗಿಯೇ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ತಯಾರಿ ನಡೆಸಿದೆ. 

ICC ಟೆಸ್ಟ್ ಶ್ರೇಯಾಂಕ ಪ್ರಕಟ: ಕೊಹ್ಲಿ ಅಗ್ರಸ್ಥಾನಕ್ಕೆ ಗಂಡಾಂತರ..!

ತಂಡದ ಪಾಲಿಗೆ ಇದು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಪಂದ್ಯವಾಗಲಿದೆ ಎನ್ನುವುದರ ಜತೆಗೆ ವಿಶ್ವ ರ‍್ಯಾಂಕಿಂಗ್’ನಲ್ಲಿ ಅಗ್ರ ಸ್ಥಾನ ಉಳಿಸಿಕೊಳ್ಳಲು ಸರಣಿಯನ್ನು ಗೆಲ್ಲಬೇಕಾದ ಒತ್ತಡವೂ ಇದೆ. ಟೆಸ್ಟ್‌ ಮಾದರಿಯಲ್ಲಿ ವಿಂಡೀಸ್‌ ದುರ್ಬಲವಾಗಿದ್ದು, ಭಾರತವೇ ಗೆಲ್ಲುವ ಫೇವರಿಟ್‌ ಎನಿಸಿದೆ. ಒಂದೊಮ್ಮೆ 2 ಪಂದ್ಯಗಳ ಸರಣಿಯಲ್ಲಿ 0-1ರಿಂದ ಸೋಲುಂಡರೆ ಭಾರತ, ಅಗ್ರಸ್ಥಾನ ಕಳೆದುಕೊಳ್ಳಲಿದೆ.

ಆ.22ರಿಂದ 2 ಪಂದ್ಯಗಳ ಸರಣಿಯ ಮೊದಲ ಪಂದ್ಯ ಆರಂಭಗೊಳ್ಳಲಿದ್ದು, ಸರಣಿಯನ್ನು 1-1ರಲ್ಲಿ ಡ್ರಾ ಮಾಡಿಕೊಂಡರೂ ಭಾರತ ಅಗ್ರಸ್ಥಾನ ಉಳಿಸಿಕೊಳ್ಳಲಿದೆ. ಆದರೆ 2ನೇ ಸ್ಥಾನದಲ್ಲಿರುವ ತಂಡದೊಂದಿಗೆ ಅಂತರ ಕಡಿಮೆಯಾಗಲಿದೆ.

ಕರ್ನಾಟಕ ಕ್ರಿಕೆಟ್‌ಗೆ ವಿನಯ್‌ ಕುಮಾರ್ ಗುಡ್‌ಬೈ!

ನಂ.1 ರೇಸ್‌ನಲ್ಲಿ ಕಿವೀಸ್‌, ದ.ಆಫ್ರಿಕಾ

ಭಾರತ ಸದ್ಯ 113 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್‌ 111 ಅಂಕಗಳನ್ನು ಪಡೆದಿದ್ದು 2ನೇ ಸ್ಥಾನ ಪಡೆದಿದೆ. ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಕಿವೀಸ್‌ ಗೆದ್ದಿದ್ದರೆ ಅಗ್ರಸ್ಥಾನವನ್ನು ತನ್ನದಾಗಿಸಿಕೊಳ್ಳುತ್ತಿತ್ತು. ನ್ಯೂಜಿಲೆಂಡ್‌ ಸೋಲು ಭಾರತಕ್ಕೆ ಲಾಭವಾಯಿತು. ಭಾರತ ಮೊದಲ ಟೆಸ್ಟ್‌ ಸೋತು, ಲಂಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ಗೆದ್ದರೆ, ಅಗ್ರಸ್ಥಾನ ನ್ಯೂಜಿಲೆಂಡ್‌ ಪಾಲಾಗಲಿದೆ.

ಒಂದೊಮ್ಮೆ ಭಾರತ ಹಾಗೂ ನ್ಯೂಜಿಲೆಂಡ್‌ ಎರಡೂ ತಂಡಗಳು ಸೋಲುಂಡರೆ, ಒಂದೂ ಪಂದ್ಯವನ್ನು ಆಡದೆ ದಕ್ಷಿಣ ಆಫ್ರಿಕಾ ಅಗ್ರಸ್ಥಾನಕ್ಕೇರಲಿದೆ. 108 ಅಂಕಗಳೊಂದಿಗೆ ದ.ಆಫ್ರಿಕಾ 3ನೇ ಸ್ಥಾನದಲ್ಲಿದೆ.

ಭಾರತಕ್ಕೆ ಕ್ಲೀನ್‌ ಸ್ವೀಪ್‌ ಗುರಿ

ಟೆಸ್ಟ್‌ ಚಾಂಪಿಯನ್‌ನ ವ್ಯಾಪ್ತಿಗೆ ಸೇರಿರುವ ಸರಣಿ ಆಗಿರುವ ಕಾರಣ ಭಾರತ ಈ ಸರಣಿಯಲ್ಲಿ ಪೂರ್ತಿ 120 ಅಂಕಗಳನ್ನು ಪಡೆಯುವ ಗುರಿ ಹೊಂದಿದೆ. 2 ಪಂದ್ಯಗಳ ಸರಣಿ ಆಗಿರುವ ಕಾರಣ ಪ್ರತಿ ಪಂದ್ಯ ಗೆದ್ದರೆ 60 ಅಂಕ ದೊರೆಯಲಿದೆ. 2-0ಯಲ್ಲಿ ಸರಣಿ ಗೆದ್ದರೆ ಭಾರತಕ್ಕೆ 2 ರೇಟಿಂಗ್‌ ಅಂಕ ಸಿಗಲಿದ್ದು, 2ನೇ ಸ್ಥಾನದಲ್ಲಿರುವ ತಂಡದೊಂದಿಗೆ ಉತ್ತಮ ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ.