ಒಂದುವೇಳೆ 0-3 ಅಂತರದಲ್ಲಿ ಭಾರತ ಸರಣಿ ಸೋತರೂ, ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಲಿದೆ. ಆದರೆ ಒಂದೊಮ್ಮೆ ದ.ಆಫ್ರಿಕಾ 3-0 ಅಂತರದಲ್ಲಿ ಸರಣಿ ಗೆದ್ದು, ಕ್ಲೀನ್ ಸ್ವೀಪ್ ಸಾಧಿಸಿದರೆ ಶ್ರೇಯಾಂಕ ಪಟ್ಟಿಯಲ್ಲಿ ಭಾರತದೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಳ್ಳಲಿದೆ.
ದುಬೈ(ಜ.04): ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಕೇವಲ 1 ದಿನ ಮಾತ್ರ ಬಾಕಿ ಇದ್ದು, ಅಸಲಿ ಸವಾಲಿಗೆ ಭಾರತ ಭಾರೀ ಸಿದ್ಧತೆ ನಡೆಸಿದೆ. ಐಸಿಸಿ ಟೆಸ್ಟ್ ಶ್ರೇಯಾಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ದ.ಆಫ್ರಿಕಾ 2ನೇ ಸ್ಥಾನ ಉಳಿಸಿಕೊಂಡಿದೆ. ಸರಣಿಯ ಫಲಿತಾಂಶ ಏನೇ ಆದರೂ, ಭಾರತದ ಅಗ್ರಸ್ಥಾನಕ್ಕೇನೂ ತೊಂದರೆಯಾಗುವುದಿಲ್ಲ.
ಒಂದುವೇಳೆ 0-3 ಅಂತರದಲ್ಲಿ ಭಾರತ ಸರಣಿ ಸೋತರೂ, ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಲಿದೆ. ಆದರೆ ಒಂದೊಮ್ಮೆ ದ.ಆಫ್ರಿಕಾ 3-0 ಅಂತರದಲ್ಲಿ ಸರಣಿ ಗೆದ್ದು, ಕ್ಲೀನ್ ಸ್ವೀಪ್ ಸಾಧಿಸಿದರೆ ಶ್ರೇಯಾಂಕ ಪಟ್ಟಿಯಲ್ಲಿ ಭಾರತದೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಳ್ಳಲಿದೆ.
ಭಾರತ ತಂಡ ಸದ್ಯ 124 ರೇಟಿಂಗ್ ಅಂಕಗಳನ್ನು ಹೊಂದಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ದಕ್ಷಿಣ ಆಫ್ರಿಕಾ, ಭಾರತಕ್ಕಿಂತ 13 ಅಂಕಗಳಿಂದ ಹಿಂದಿದೆ. ಸರಣಿಯನ್ನು ಆಫ್ರಿಕಾ 3-0 ಗೆದ್ದರೆ, ಉಭಯ ತಂಡಗಳು 118 ಅಂಕಗಳೊಂದಿಗೆ ಸಮಬಲ ಸಾಧಿಸಲಿವೆ. ಒಂದು ವೇಳೆ ಭಾರತ 3-0 ಅಂತರದಲ್ಲಿ ಸರಣಿ ಗೆದ್ದರೆ ತಂಡದ ರೇಟಿಂಗ್ ಅಂಕ 128ಕ್ಕೆ ಏರಿಕೆಯಾಗಲಿದೆ. ಆಗ ಆಫ್ರಿಕಾ 107 ಅಂಕಗಳಿಗೆ ಕುಸಿಯಲಿದೆ.
ಕೊಹ್ಲಿಗೆ 9೦೦ ಅಂಕಗಳ ಗುರಿ:
ವಿರಾಟ್ ಕೊಹ್ಲಿ ಸದ್ಯ ಟೆಸ್ಟ್ ಬ್ಯಾಟ್ಸ್'ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ 893 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ತೋರಿದರೆ, ತಮ್ಮ ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ 900 ರೇಟಿಂಗ್ ಅಂಕಗಳನ್ನು ಕೊಹ್ಲಿ ತಲುಪಲಿದ್ದಾರೆ.