ವೈಜಾಗ್[ಅ.02]: ಭಾರತ- ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದಿದ್ದು, ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 91 ರನ್ ಬಾರಿಸಿದೆ. ಅಜೇಯ ಅರ್ಧಶತಕ ಸಿಡಿಸುವ ಮೂಲಕ ಆರಂಭಿಕನಾಗಿ ರೋಹಿತ್ ಶರ್ಮಾ ಯಶಸ್ವಿಯಾಗಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಭಾರತಕ್ಕೆ ರೋಹಿತ್ ಶರ್ಮಾ- ಮಯಾಂಕ್ ಅಗರ್‌ವಾಲ್ ಜೋಡಿ ಸದೃಢ ಆರಂಭ ಒದಗಿಸಿದೆ. ಆಫ್ರಿಕಾ ಬೌಲರ್ ಗಳ ಎದುರು ಸಂಪೂರ್ಣ ಪ್ರಾಬಲ್ಯ ಮೆರೆದ ಈ ಜೋಡಿ ಮೊದಲ ವಿಕೆಟ್’ಗೆ ಮುರಿಯದ 91 ರನ್ ಗಳ ಜತೆಯಾಟ ನಿಭಾಯಿಸಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್’ನಲ್ಲಿ ಮೊದಲ ಬಾರಿಗೆ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ತಂಡದ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ರೋಹಿತ್ ಆ ಬಳಿಕ ನಿರ್ಭಯವಾಗಿ ಬ್ಯಾಟ್ ಬೀಸಿದರು. ರೋಹಿತ್ 84 ಎಸೆತದಲ್ಲಿ 52 ರನ್ ಬಾರಿಸಿದರು. ಈ ಸೊಗಸಾದ ಇನಿಂಗ್ಸ್ ನಲ್ಲಿ 5 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್ ಗಳು ಸೇರಿದ್ದವು. ರೋಹಿತ್ ಗೆ ಉತ್ತಮ ಸಾಥ್ ನೀಡಿದ ಕನ್ನಡಿಗ ಮಯಾಂಕ್ ಅಗರ್‌ವಾಲ್ 96 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿದ್ದು, ಅರ್ಧಶತಕದತ್ತ ದಾಪುಗಾಲು ಹಾಕುತ್ತಿದ್ದಾರೆ.

ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ರೋಹಿತ್ 11ನೇ ಅರ್ಧಶತಕ: ಟೆಸ್ಟ್ ಕ್ರಿಕೆಟ್ ನಲ್ಲಿ ಇದೇ ಮೊದಲ ಬಾರಿಗೆ ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದಿರುವ ರೋಹಿತ್ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಇದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಲ್ಲಿ 11 ಟೆಸ್ಟ್ ಅರ್ಧಶತಕವಾಗಿದೆ. ಈಗಾಗಲೇ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಯಶಸ್ವಿ ಕ್ರಿಕೆಟಿಗ ಎನಿಸಿರುವ ರೋಹಿತ್ ರೆಡ್ ಬಾಲ್ ಕ್ರಿಕೆಟ್ ನಲ್ಲೂ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.

ವಿಕೆಟ್ ಪಡೆಯಲು ಹರಸಾಹಸ: ಟೀಂ ಇಂಡಿಯಾ ವಿಕೆಟ್ ಪಡೆಯಲು ಹರಿಣಗಳ ನಾಯಕ ಫಾಫ್ ಡು ಪ್ಲೆಸಿಸ್ ಮೊದಲ ಸೆಷನ್ ನಲ್ಲೇ 5 ಬೌಲರ್ ಗಳನ್ನು ಕಣಕ್ಕಿಳಿಸಿದರು ಯಶಸ್ಸು ಕಾಣಲಿಲ್ಲ. ರಬಾಡ, ಫಿಲಾಂಡರ್, ಕೇಶವ್ ಮಹರಾಜ್ ಬೌಲಿಂಗ್ ಅನ್ನು ಟೀಂ ಇಂಡಿಯಾ ಆರಂಭಿಕರು ಯಶಸ್ವಿಯಾಗಿ ಎದುರಿಸಿದ್ದಾರೆ. 

ಸಂಕ್ಷಿಪ್ತ ಸ್ಕೋರ್: 
ಭಾರತ: 91/0
ರೋಹಿತ್ ಶರ್ಮಾ: 52
ಮಯಾಂಕ್ ಅಗರ್‌ವಾಲ್: 39