Asianet Suvarna News Asianet Suvarna News

ಭಾರತ ವಿರುದ್ಧ ಕಿವೀಸ್ ಗೆಲ್ಲಲು ಇನ್ನೂ ಬೇಕಿದೆ 341 ರನ್; ಕೈಲಿರುವುದು ಆರೇ ವಿಕೆಟ್

ಭಾರತದ ಸ್ಪಿನ್ನರ್'ಗಳಾದ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಕರಾರುವಾಕ್ ಬೌಲಿಂಗ್ ಅನ್ನು ಎದುರಿಸಿ ಕೊನೆಯ ದಿನದಾಟವನ್ನು ಆಡಿ ಜೈಸುವುದು ನ್ಯೂಜಿಲೆಂಡ್ ತಂಡದ ಮುಂದಿರುವ ಬಹುದೊಡ್ಡ ಸವಾಲಾಗಿದೆ.

india vs nz first test day 4 updates

ಕಾನ್'ಪುರ್(ಸೆ. 25): ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಉಳಿಸಿಕೊಳ್ಳಲು ಪ್ರವಾಸಿ ನ್ಯೂಜಿಲೆಂಡ್ ತಂಡ ಹರಸಾಹಸ ನಡೆಸುತ್ತಿದೆ. ಭಾರತ ತನ್ನ ಎರಡನೇ ಇನ್ನಿಂಗ್ಸನ್ನು 377 ರನ್ನಿಗೆ ಡಿಕ್ಲೇರ್ ಮಾಡಿಕೊಂಡು ನ್ಯೂಜಿಲೆಂಡ್ ಗೆಲುವಿಗೆ 434 ರನ್ ಗುರಿ ನೀಡಿತು. ಬೃಹತ್ ಸವಾಲು ಸ್ವೀಕರಿಸಿದ ಕಿವೀಸ್ ಬಳಗ ಆರಂಭಿಕ ಆಘಾತ ಅನುಭವಿಸಿದರೂ ಕೊಂಚ ಚೇತರಿಸಿಕೊಂಡು ನಾಲ್ಕನೇ ದಿನಾಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 93 ರನ್ ಪೇರಿಸಿದೆ. ಪಂದ್ಯ ಗೆಲ್ಲಲು ಕಿವೀಸ್ ಇನ್ನೂ 341 ರನ್ ಗಳಿಸಬೇಕಿದೆ. ಕೈಲಿರುವುದು 6 ವಿಕೆಟ್ ಮಾತ್ರ. ಪಂದ್ಯ ಉಳಿಸಿಕೊಳ್ಳಲು ನಾಳೆ ಇಡೀ ದಿನ ಬ್ಯಾಟ್ ಮಾಡಬೇಕಿದೆ. ದಿನೇದಿನೇ ಕಠಿಣಗೊಳ್ಳುತ್ತಿರುವ ಈ ಪಿಚ್'ನಲ್ಲಿ ಕೊನೆಯ ದಿನ ಬ್ಯಾಟ್ ಮಾಡುವುದು ತೀರಾ ಪ್ರಯಾಸದ ಕೆಲಸ. ಕಿವೀಸ್ ಈ ಪಂದ್ಯ ಉಳಿಸಿಕೊಳ್ಳಲು ತೀರಾ ಹರಸಾಹಸ ನಡೆಸಬೇಕಿದೆ.

ನಿನ್ನೆ ಮೂರನೇ ದಿನಾಂತ್ಯದಲ್ಲಿ ಒಂದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದ ಭಾರತ ಇಂದಿನ ದಿನಾರಂಭದಲ್ಲಿ ಹೆಚ್ಚಿನ ಯಶಸ್ಸು ಗಳಿಸಲಿಲ್ಲ. ಮುರಳಿ ವಿಜಯ್, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಹೆಚ್ಚು ಹೊತ್ತು ಕ್ರೀಸ್'ನಲ್ಲಿ ಉಳಿಯಲಿಲ್ಲ. ಮುರಳಿ ವಿಜಯ್ ಮತ್ತು ಪೂಜಾರ ತಮ್ಮ ಅರ್ಧಶತಕವನ್ನು ಮೂರಂಕಿಯ ಮೊತ್ತಕ್ಕೆ ತಿರುಗಿಸುವಲ್ಲಿ ವಿಫಲರಾದರು. ಅದಾದ ಬಳಿಕ ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಉತ್ತಮವಾಗಿ ಬ್ಯಾಟ್ ಬೀಸಿ ತಂಡದ ಸ್ಕೋರನ್ನು ಉಬ್ಬಿಸಿದರು. ಜಡೇಜಾ ಬಿಡುಬೀಸಾಗಿ ಬ್ಯಾಟಿಂಗ್ ನಡೆಸಿ 58 ಎಸೆತದಲ್ಲಿ ಅರ್ಧಶತಕ ಗಳಿಸಿದರು. ರೋಹಿತ್ ಶರ್ಮಾ ಕೂಡ ಅಜೇಯ ಅರ್ಧಶತಕ ಭಾರಿಸಿದರು. ದಿನಾಂತ್ಯಕ್ಕೆ ಇನ್ನೊಂದು ಸೆಷೆನ್ ಬಾಕಿ ಇರುವಂತೆಯೇ ನಾಯಕ ವಿರಾಟ್ ಕೊಹ್ಲಿ ತಂಡದ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ಕಳೆಗುಂದುತ್ತಿರುವ ಪಿಚ್'ನಲ್ಲಿ ನ್ಯೂಜಿಲಂಡ್ ಬ್ಯಾಟುಗಾರರು ಚಮತ್ಕಾರ ತೋರುವ ಯಾವ ನಿರೀಕ್ಷೆಯೂ ಇರಲಿಲ್ಲ. ಇನ್ನಿಂಗ್ಸ್'ನ ನಾಲ್ಕನೇ ಓವರ್'ನಲ್ಲಿ ಇದು ಸಾಬೀತಾಯಿತು. ಅಶ್ವಿನ್ ಬೌಲಿಂಗ್'ನಲ್ಲಿ ಒಂದೇ ಓವರ್'ನಲ್ಲಿ ಲಾಥಾಮ್ ಮತ್ತು ಗುಪ್ಟಿಲ್ ಔಟಾಗಿ ಪೆವಿಲಿಯನ್'ಗೆ ಮರಳಿದರು. ಕೇನ್ ವಿಲಿಯಮ್ಸನ್, ರಾಸ್ ಟೇಲರ್ ಮತ್ತು ಲೂಕ್ ರೋಂಚಿ ಅವರು ತಂಡದ ಪತನದ ಬಿರುಸನ್ನು ಒಂದಷ್ಟು ಕಡಿಮೆ ಮಾಡಿದರು. ನ್ಯೂಜಿಲೆಂಡ್ ಈ ದಿನದಾಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ. ಗೆಲ್ಲಲು ಇನ್ನೂ 341 ರನ್ ಗಳಿಸಬೇಕಿದೆ.

ಭಾರತದ ಸ್ಪಿನ್ನರ್'ಗಳಾದ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಕರಾರುವಾಕ್ ಬೌಲಿಂಗ್ ಅನ್ನು ಎದುರಿಸಿ ಕೊನೆಯ ದಿನದಾಟವನ್ನು ಆಡಿ ಜೈಸುವುದು ನ್ಯೂಜಿಲೆಂಡ್ ತಂಡದ ಮುಂದಿರುವ ಬಹುದೊಡ್ಡ ಸವಾಲಾಗಿದೆ.

ಸ್ಕೋರು ವಿವರ(4ನೇ ದಿನಾಂತ್ಯಕ್ಕೆ):

ಭಾರತ ಮೊದಲ ಇನ್ನಿಂಗ್ಸ್ 97 ಓವರ್ 318 ರನ್ ಆಲೌಟ್

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 95.5 ಓವರ್ 262 ರನ್ ಆಲೌಟ್

ಭಾರತ ಎರಡನೇ ಇನ್ನಿಂಗ್ಸ್ 107.2 ಓವರ್ 377/5(ಡಿಕ್ಲೇರ್)
(ಚೇತೇಶ್ವರ್ ಪೂಜಾರ 78, ಮುರಳಿ ವಿಜಯ್ 76, ರೋಹಿತ್ ಶರ್ಮಾ ಅಜೇಯ 68, ರವೀಂದ್ರ ಜಡೇಜಾ ಅಜೇಯ 50, ಅಜಿಂಕ್ಯ ರಹಾನೆ 40, ಕೆಎಲ್ ರಾಹುಲ್ 38 ರನ್ - ಮಿಶೆಲ್ ಸ್ಯಾಂಟ್ನರ್ 79/2, ಈಶ್ ಸೋಧಿ 99/2)

ನ್ಯೂಜಿಲೆಂಡ್ 37 ಓವರ್ 93/4
(ಲೂಕ್ ರೋಂಚಿ ಅಜೇಯ 38, ಕೇನ್ ವಿಲಿಯಮ್ಸನ್ 25 ರನ್ - ಆರ್.ಅಶ್ವಿನ್ 68/3)

Latest Videos
Follow Us:
Download App:
  • android
  • ios