ಲಂಡನ್‌[ಮೇ.25]: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಭಾರತ, ಇಂಗ್ಲೆಂಡ್‌ಗೆ ತಲುಪಿ 3 ದಿನಗಳಾಗಿದ್ದು ಶನಿವಾರ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿರುವ ಭಾರತ, 4ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರ ಯಾರು ಎನ್ನುವುದನ್ನು ಗುರುತಿಸಲಿದೆ.

ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ, ಭಾರತೀಯರಿಗೆ ಈ ವಿಶ್ವಕಪ್‌ನ ಮೊದಲ ಅನುಭವ ನೀಡಲಿದೆ. ಟೂರ್ನಿಗೆ ಪಿಚ್‌ ಹೇಗೆ ಸಿದ್ಧಪಡಿಸಲಾಗಿದೆ, ಸ್ಥಳೀಯ ವಾತಾವರಣ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿ ಕಲೆಹಾಕಲು ಈ ಪಂದ್ಯ ನೆರವಾಗಲಿದೆ.

ಐಪಿಎಲ್‌ನಲ್ಲಿ ಆಡಿ ದಣಿದ ಆಟಗಾರರು, ಕೆಲ ದಿನಗಳ ವಿಶ್ರಾಂತಿ ಬಳಿಕ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ರೌಂಡ್‌ ರಾಬಿನ್‌ ಮಾದರಿ ಕಾರಣ, ಈ ವಿಶ್ವಕಪ್‌ ಅತ್ಯಂತ ಕಠಿಣವಾಗಿರಲಿದೆ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಸುದೀರ್ಘ ಒಂದೂವರೆ ತಿಂಗಳ ಟೂರ್ನಿಯಲ್ಲಿ ಲಯ ಹಾಗೂ ಫಿಟ್ನೆಸ್‌ ಉಳಿಸಿಕೊಳ್ಳುವುದು ಆಟಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ರೋಹಿತ್‌ ಶರ್ಮಾ, ಶಿಖರ್‌ ಧವನ್‌ ಆರಂಭಿಕರಾಗಿ ಆಡಲಿದ್ದು, ವಿರಾಟ್‌ ಕೊಹ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯಲಿದ್ದಾರೆ. ಕೆ.ಎಲ್‌.ರಾಹುಲ್‌ ಹಾಗೂ ವಿಜಯ್‌ ಶಂಕರ್‌ ನಡುವೆ 4ನೇ ಕ್ರಮಾಂಕದಲ್ಲಿ ಸ್ಥಾನಕ್ಕಾಗಿ ಪೈಪೋಟಿ ಇದೆ. ಎಂ.ಎಸ್‌.ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ ಪಾತ್ರ ಪ್ರಮುಖವೆನಿಸಲಿದೆ. ಜಸ್ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಮೊಹಮದ್‌ ಶಮಿ, ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌, ರವೀಂದ್ರ ಜಡೇಜಾ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ.

ಹಾರ್ದಿಕ್‌, ಜಾಧವ್‌ರ ಆಲ್ರೌಂಡ್‌ ಆಟದ ಮೇಲೆ ತಂಡ ಹೆಚ್ಚು ವಿಶ್ವಾಸವಿರಿಸಿದ್ದು, ಭಾರತ ನಿರೀಕ್ಷೆಯಂತೆ ಸೆಮಿಫೈನಲ್‌ ವರೆಗೂ ಸಾಗಬೇಕಿದ್ದರೆ ಈ ಇಬ್ಬರು ಸ್ಥಿರ ಪ್ರದರ್ಶನ ತೋರಬೇಕಿದೆ.

ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆಡುತ್ತಿರುವುದು ಹಲವು ರೀತಿಗಳಲ್ಲಿ ಭಾರತಕ್ಕೆ ಲಾಭವಾಗಲಿದೆ. ಕೇನ್‌ ವಿಲಿಯಮ್ಸನ್‌, ರಾಸ್‌ ಟೇಲರ್‌ ಸೇರಿದಂತೆ ನ್ಯೂಜಿಲೆಂಡ್‌ನ ಪ್ರಮುಖ ಬ್ಯಾಟ್ಸ್‌ಮನ್‌ಗಳು ಸ್ಪಿನ್‌ ಬೌಲಿಂಗನ್ನು ಸಮರ್ಥವಾಗಿ ಎದುರಿಸಲಿದ್ದಾರೆ. ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಸ್ಪಿನ್‌ ಬೌಲಿಂಗ್‌ ಎಷ್ಟರ ಮಟ್ಟಿಗೆ ಕೈಹಿಡಿಯಲಿದೆ ಎನ್ನುವ ಲೆಕ್ಕಾಚಾರ ನಡೆಸಲು ಈ ಪಂದ್ಯ ನೆರವಾಗಲಿದೆ.

ಭಾರತ ಮೇ 28ರಂದು ತನ್ನ 2ನೇ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಜೂ.5ರಂದು ರೌಂಡ್‌ ರಾಬಿನ್‌ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಪಂದ್ಯದ ಟಿಕೆಟ್‌ಗಳು ಸೋಲ್ಡ್‌ಔಟ್‌!

ಭಾರತದ ಅಭ್ಯಾಸ ಪಂದ್ಯಗಳಿಗೂ ಹೆಚ್ಚಿನ ಬೇಡಿಕೆ ಇದ್ದು, ನ್ಯೂಜಿಲೆಂಡ್‌ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯಗಳು ಸೋಲ್ಡ್‌ ಔಟ್‌ ಆಗಿವೆ ಎಂದು ಲಂಡನ್‌ನ ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಇದೆ ಎನ್ನಲಾಗಿದೆ.

ತಂಡಗಳ ವಿವರ

ಭಾರತ: ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌.ರಾಹುಲ್‌, ವಿಜಯ್‌ ಶಂಕರ್‌, ಎಂ.ಎಸ್‌.ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌.

ನ್ಯೂಜಿಲೆಂಡ್‌: ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ಹೆನ್ರಿ ನಿಕೋಲ್ಸ್‌, ರಾಸ್‌ ಟೇಲರ್‌, ಟಾಮ್‌ ಬ್ಲಂಡೆಲ್‌, ಜಿಮ್ಮಿ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಕಾಲಿನ್‌ ಡಿ ಗ್ರಾಂಡ್‌ಹೋಮ್‌, ಇಶ್‌ ಸೋಧಿ, ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ, ಲಾಕಿ ಫಗ್ರ್ಯೂಸನ್‌, ಮ್ಯಾಟ್‌ ಹೆನ್ರಿ.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1