ಬೇ ಓವಲ್(ಜ.26): ಗಣರಾಜ್ಯೋತ್ಸವ ದಿನ ಟೀಂ ಇಂಡಿಯಾ ಅಭಿಮಾನಿಗಳಿಗೆ ಡಬಲ್ ಧಮಾಕ. ಒಂದೆಡೆ ಗಣತಂತ್ರದ ಸಂಭ್ರಮವಾದರೆ, ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 90 ರನ್ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್ ನೆಲದಲ್ಲಿ ಭಾರತ ಗರಿಷ್ಠ ರನ್ ಅಂತರದಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಕಣಕ್ಕಿಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅತ್ಯುತ್ತಮ ಆರಂಭ ಟೀಂ ಇಂಡಿಯಾದ ಬೃಹತ್ ಮೊತ್ತವನ್ನ ಖಚಿತಪಡಿಸಿತು. ಧವನ್ 66 ರನ್ ಸಿಡಿಸಿದರೆ, ರೋಹಿತ್ 87 ರನ್ ಸಿಡಿಸಿದರು.

ಇದನ್ನೂ ಓದಿ:ಗಂಭೀರ್, ಬಚೇಂದ್ರಿ ಪಾಲ್ ಸೇರಿ 9 ಕ್ರೀಡಾಸಾಧಕರಿಗೆ ಒಲಿದ ಪದ್ಮಶ್ರೀ ಗೌರವ

ಆರಂಭಿಕರ ಅಬ್ಬರದ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ  ಅಂಬಾಟಿ ರಾಯುಡು ಜೊತೆಯಾಟ ನ್ಯೂಜಿಲೆಂಡ್ ಬೌಲರ್‌ಗಳಿಗೆ ತಲೆನೋವಾಯಿತು. ಕೊಹ್ಲಿ 43 ರನ್ ಸಿಡಿಸಿ ಔಟಾದರೆ, ರಾಯುಡು 47 ರನ್  ಸಿಡಿಸಿದರು. ಅಂತಿಮ ಹಂತದಲ್ಲಿ ಎಂ.ಎಸ್.ಧೋನಿ ಹಾಗೂ ಕೇದಾರ್ ಜಾದವ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಧೋನಿ 33 ಎಸೆತದಲ್ಲಿ ಅಜೇಯ 48 ರನ್ ಸಿಡಿಸಿದರೆ, ಕೇದಾರ್ ಜಾದವ್ 22 ರನ್ ಬಾರಿಸಿದರು. ಈ ಮೂಲಕ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 324 ರನ್ ಸಿಡಿಸಿತು. ಟ್ರೆಂಟ್ ಬೊಲ್ಟ್ ಹಾಗೂ ಲ್ಯೂಕಿ ಫರ್ಗ್ಯುಸನ್ ತಲಾ 2 ವಿಕೆಟ್ ಕಬಳಿಸಿದರು.

ಇದನ್ನೂ ಓದಿ:2019ರ ವಿಶ್ವಕಪ್: ಎಂ.ಎಸ್.ಧೋನಿಗೆ 4ನೇ ಕ್ರಮಾಂಕ!

325ರನ್ ಬೃಹತ್ ಗುರಿ ಪಡೆದ ನ್ಯೂಜಿಲೆಂಡ್, ಟೀಂ ಇಂಡಿಯಾ ದಾಳಿಗೆ ತತ್ತರಿಸಿತು. ಮಾರ್ಟಿನ್ ಗಪ್ಟಿಲ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಆರಂಭದಲ್ಲಿ ವಿಕೆಟ್ ಕೈಚೆಲ್ಲಿದರು. ಕಾಲಿನ್ ಮುನ್ರೋ 31 ರನ್ ಕಾಣಿಕೆ ನೀಡಿದರು. 22 ರನ್  ಸಿಡಿಸಿದ ರಾಸ್ ಟೇಲರ್, ಧೋನಿ ಅದ್ಬುತ ಸ್ಟಂಪ್‌ಗೆ ಪೆವಿಲಿಯನ್ ಸೇರಿದರು.

ಇದನ್ನೂ ಓದಿ: ಗೆಲುವಿನ ಬಳಿಕ ಧೋನಿ-ಕೊಹ್ಲಿ ಕ್ರೀಡಾಂಗಣದಲ್ಲಿ ಮಕ್ಕಳಾಟ-ವಿಡಿಯೋ ವೈರಲ್!

ಟಾಮ್ ಲಾಥಮ್ 34, ಹೆನ್ರಿ ನಿಕೋಲಸ್ 28 ರನ್ ಸಿಡಿಸಿದರು. ಕುಲ್ದೀಪ್ ಮೋಡಿಗೆ ಕುಸಿದ ನ್ಯೂಜಿಲೆಂಡ್ ಸೋಲಿನ ಸುಳಿಗೆ ಸಿಲುಕಿತು. ಅಂತಿಮ ಹಂತದಲ್ಲಿ ಡಗ್ ಬ್ರಾಸ್‌ವೆಲ್ ಅರ್ಧಶತಕ ಸಿಡಿಸಿ ಅಲ್ಪಮೊತ್ತಕ್ಕೆ ಆಲೌಟ್ ಆಗೋದನ್ನ ತಪ್ಪಿಸಿದರು. ಬ್ರಾಸ್‌ವೆಲ್ 57 ರನ್ ಸಿಡಿಸಿ ಔಟಾಗುತ್ತಿದ್ದಂತೆ, ಲ್ಯೂಕಿ ಫರ್ಗ್ಯುಸನ್ ವಿಕೆಟ್ ಪತನಗೊಂಡಿತು. ಈ ಮೂಲಕ ನ್ಯೂಜಿಲೆಂಡ್ 40.2 ಓವರ್‌ಗಳಲ್ಲಿ 234 ರನ್‌ಗೆ ಆಲೌಟ್ ಆಯಿತು.  90 ರನ್ ಗೆಲುವು ದಾಖಲಿಸಿದ ಭಾರತ ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು.