ನಾಟಿಂಗ್‌ಹ್ಯಾಮ್(ಆ.18): ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡರೂ ದಿಟ್ಟ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. ದಿನದಾಟದ ಅಂತ್ಯಕ್ಕೆ ಭಾರತ 307 ರನ್ ಸಿಡಿಸಿದೆ.   ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಅತ್ಯುತ್ತಮ ಪ್ರದರ್ಶನದಿಂದ ಭಾರತದ ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ.

ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ  ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ 60 ರನ್‌ಗಳ ಜೊತೆಯಾಟ ನೀಡಿದರು. ಆದರೆ  ಧವನ್ 35 ರನ್ ಸಿಡಿಸಿದರೆ, ರಾಹುಲ್ 23 ರನ್ ಗಳಿಸಿ ಔಟಾದರು. ಆರಂಭಿಕರ ವಿಕೆಟ್ ಪತನದ ಬಳಿಕ  ಚೇತೇಶ್ವರ ಪೂಜಾರ ಆಧಾರವಾಗಲಿಲ್ಲ.

ಪೂಜಾರ 14 ರನ್ ಸಿಡಿಸಿ ಔಟಾದರು. 82 ರನ್‌ಗೆ 3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಆಸರೆಯಾದರು. ಕೊಹ್ಲಿ ಹಾಗೂ ರಹಾನೆ ಹಾಫ್ ಸೆಂಚುರಿ ಸಿಡಿಸಿ ಆಸರೆಯಾದರು. ಕಳಪೆ ಫಾರ್ಮ್‌ನಿಂದ ಹೊರಬಂದು ಉತ್ತಮ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ 81 ರನ್ ಸಿಡಿಸಿ ಔಟಾದರು. 

ನಾಯಕ ವಿರಾಟ್ ಕೊಹ್ಲಿ 97 ರನ್ ಸಿಡಿಸಿ ಔಟಾಗಿದ್ದಾರೆ.  ಈ ಮೂಲಕ ಕೇವಲ 3 ರನ್‌ಗಳಿಂದ ಶತಕ ವಂಚಿತರಾದರು.  152 ಎಸೆತ ಎದುರಿಸಿದ ವಿರಾಟ್ ಕೊಹ್ಲಿ 11 ಬೌಂಡರಿ ನೆರವಿನಿಂದ 9 7 ರನ್ ಸಿಡಿಸಿ ಔಟಾದರು. ಇದರೊಂದಿಗೆ ಭಾರತ 5ನೇ ವಿಕೆಟ್ ಕಳೆದುಕೊಂಡಿತು.  

ಹಾರ್ದಿಕ್ ಪಾಂಡ್ಯ ಹಾಗೂ ಚೊಚ್ಚಲ ಟೆಸ್ಟ್ ಪಂದ್ಯ ಆಡುತ್ತಿರುವ ರಿಷಬ್ ಪಂತ್ ಇಂಗ್ಲೆಂಡ್ ಬೌಲರ್‌ಗಳ ತಾಳ್ಮೆ ಪರೀಕ್ಷಿಸಿದರು. ಆದರೆ ಪಾಂಡ್ಯ 18 ರನ್ ಸಿಡಿಸಿ ಔಟಾದರು. ಈ ಮೂಲಕ ದಿನದಾಟ ಅಂತ್ಯಗೊಂಡಿತು. ರಿಷಬ್ ಪಂತ್ ಅಜೇಯ 22 ರನ್ ಸಿಡಿಸಿ ಕ್ರಿಸ್ ಕಾಯ್ದುಕೊಂಡಿದ್ದಾರೆ. ಭಾರತ ಮೊದಲ ದಿನದಾಟದಲ್ಲಿ 6 ವಿಕೆಟ್ ನಷ್ಟಕ್ಕೆ 307 ರನ್ ಸಿಡಿಸಿತು.