ಓವಲ್(ಸೆ.07):  5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಆರಂಭಿಕ 2 ಸೆಶನ್‌ನಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿದರೆ, ಅಂತಿಮ ಸೆಶನ್‌ನಲ್ಲಿ ಟೀಂ ಇಂಡಿಯಾ ವಿಕೆಟ್ ಕಬಳಿಸೋ ಮೂಲಕ ಕಮ್ ಬ್ಯಾಕ್ ಮಾಡಿತು. 
 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ಕೆಟನ್ ಜೆನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತು. ಆದರೆ ವಿದಾಯದ ಪಂದ್ಯ ಆಡುತ್ತಿರುವ ಅಲಿಸ್ಟೈರ್ ಕುಕ್  ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು.

ಕಳೆದ 4 ಪಂದ್ಯದಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಕುಕ್, ಕ್ರಿಕೆಟ್ ಕರಿಯರ್‌ನ ಅಂತಿಮ ಪಂದ್ಯದಲ್ಲಿ ಶತಕ ಸಿಡಿಸೋ ಸೂಚನೆ ನೀಡಿದ್ದರು.  ಆಕರ್ಷಕ ಅರ್ಧಶತಕ ಸಿಡಿಸಿ ಮುನ್ನುಗ್ಗಿದ ಕುಕ್, 71 ರನ್ ಸಿಡಿಸಿ ಔಟಾದರು. 

ಕುಕ್ ಔಟಾದ ಬೆನ್ನಲ್ಲೇ, ನಾಯಕ ಜೋ ರೂಟ್ ವಿಕೆಟ್ ಪತನಗೊಂಡಿತು. ಈ ಮೂಲಕ ಜಸ್‌ಪ್ರೀತ್ ಬುಮ್ರಾ ಸತತ 2 ವಿಕೆಟ್ ಕಬಳಿಸಿದರು.  ಜಾನಿ ಬೈರ್‌ಸ್ಟೋ ಶೂನ್ಯ ಸುತ್ತಿದರು. ಬೆನ್ ಸ್ಟೋಕ್ಸ್ ಆಟ 11 ರನ್‌ಗಳಿಗೆ ಅಂತ್ಯವಾಯಿತು.

ವಿಕೆಟ್ ಬೀಳುತ್ತಿದ್ದರೂ, ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಮೊಯಿನ್ ಅಲಿ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಹಾಫ್ ಸೆಂಚುರಿ ಬೆನ್ನಲ್ಲೇ ಅಲಿ  ವಿಕೆಟ್ ಪತನಗೊಂಡಿತು. ಇದೇ ಮೊದಲ ಬಾರಿಗೆ ಸ್ಯಾಮ್ ಕುರ್ರನ್ ಸರಣಿಯಲ್ಲಿ ಶೂನ್ಯಕ್ಕೆ ಔಟಾದರು.

ದಿನದಾಟ ಅಂತ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 198  ರನ್  ಸಿಡಿಸಿತು.  ಜೋಸ್ ಬಟ್ಲರ್ ಅಜೇಯ 11 ಹಾಗೂ ಆದಿಲ್ ರಶೀದ ಅಜೇಯ 4 ರನ್  ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.