ಸೌತಾಂಪ್ಟನ್(ಸೆ.01): ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಜೋಸ್ ಬಟ್ಲರ್ ಆಸರೆಯಾಗಿದ್ದಾರೆ. ಅರ್ಧಶತಕ ಸಿಡಿಸಿ ಅಬ್ಬರಿಸಿರುವ ಬಟ್ಲರ್ ಇದೀಗ ಟೀಂ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದ್ದಾರೆ.

ತೃತೀಯ ದಿನದಾಟದಲ್ಲಿ 2ನೇ ಇನ್ನಿಂಗ್ಸ್ ಮುಂದುವರಿಸಿದೆ ಇಂಗ್ಲೆಂಡ್ ಆರಂಭದಲ್ಲೇ  ಆಲಿಸ್ಟೈರ್ ಕುಕ್ ವಿಕೆಟ್ ಕಳೆದುಕೊಂಡಿತು. 12 ರನ್ ಸಿಡಿಸಿ ಕುಕ್ ಪೆವಿಲಿಯನ್ ಸೇರಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಮೊಯಿನ್ ಆಲಿ 9 ರನ್ ಸಿಡಿಸಿ ಇಶಾಂತ್‌ಗೆ ವಿಕೆಟ್ ಒಪ್ಪಿಸಿದರು.

ಕೆಟನ್ ಜೆನ್ನಿಂಗ್ಸ್ ಹಾಗೂ ನಾಯಕ ಜೋ ರೂಟ್ ಜೊತೆಯಾಟದಿಂದ ಇಂಗ್ಲೆಂಡ್ ಚೇತರಿಕೆ ಕಂಡಿತ್ತು. ಆದರೆ ಜೆನ್ನಿಂಗ್ಸ್ 36 ರನ್ ಸಿಡಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.  ಭೋಜನ ವಿರಾಮದ ಬಳಿಕ ಜಾನಿ ಬೈರ್‌ಸ್ಟೋ ಶೂನ್ಯ ಸುತ್ತಿದರು. ಆದರೆ ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾದರು. ರೂಟ್ 48 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. 

ಬಟ್ಲರ್ ಹಾಗೂ ಸ್ಟೋಕ್ಸ್ ಜೊತೆಯಾಟದಿಂದ ಇಂಗ್ಲೆಂಡ್ ಬೃಹತ್ ಮೊತ್ತದ ಸೂಚನೆ ನೀಡಿತು. ಆದರೆ ಸ್ಟೋಕ್ಸ್ 30 ರನ್ ಸಿಡಿಸಿ ಔಟಾದರು. ಆದರೆ ಜೋಸ್ ಬಟ್ಲರ್ ಅರ್ಧಶತಕ ಸಿಡಿಸಿ ಇಂಗ್ಲೆಂಡ್ ತಂಡಕ್ಕೇ ಚೇತರಿಕೆ ನೀಡಿದರು. ಬಟ್ಲರ್ 66 ರನ್ ಸಿಡಿಸಿ ಮುನ್ನುಗ್ಗುತ್ತಿದ್ದರೆ, ಸ್ಯಾಮ್ ಕುರ್ರನ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 224 ರನ್ ಸಿಡಿಸಿದೆ. ಈ ಮೂಲಕ 197 ರನ್ ಮುನ್ನಡೆ ಪಡೆದುಕೊಂಡಿದೆ.