ಓವಲ್(ಸೆ.07):  ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯದಲ್ಲಿಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ಆರ್ಭಟಕ್ಕೆ ಬ್ರೇಕ್ ಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಈ ಮೂಲಕ ದಿನದಾಟ ಅಂತಿಮ ಸೆಶನ್‌ನಲ್ಲಿ ಕೊಹ್ಲಿ ಸೈನ್ಯ ಕಮ್‌ಬ್ಯಾಕ್ ಮಾಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ವಿದಾಯ ಪಂದ್ಯ ಆಡುತ್ತಿರುವ ಅಲಿಸ್ಟೈರ್ ಕುಕ್ ಆಸರೆಯಾದರು. ಕಳೆದ 4 ಪಂದ್ಯದಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಕುಕ್, ಕ್ರಿಕೆಟ್ ಕರಿಯರ್‌ನ ಅಂತಿಮ ಪಂದ್ಯದಲ್ಲಿ ಶತಕ ಸಿಡಿಸೋ ಸೂಚನೆ ನೀಡಿದ್ದರು.

ಆಕರ್ಷಕ ಅರ್ಧಶತಕ ಸಿಡಿಸಿ ಮುನ್ನುಗ್ಗಿದ ಕುಕ್, 71 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ ನಿಟ್ಟುಸಿರುಬಟ್ಟಿತು.  ಅಲಿಸ್ಟೈರ್ ಕುಕ್‌ಗೆ ಮೊಯಿನ್ ಆಲಿ ಉತ್ತಮ ಸಾಥ್ ನೀಡಿದರು.

ಕುಕ್ ಔಟಾದ ಬೆನ್ನಲ್ಲೇ, ನಾಯಕ ಜೋ ರೂಟ್ ವಿಕೆಟ್ ಪತನಗೊಂಡಿತು. ಈ ಮೂಲಕ ಜಸ್‌ಪ್ರೀತ್ ಬುಮ್ರಾ ಸತತ 2 ವಿಕೆಟ್ ಕಬಳಿಸಿದರು. ನಂತರ ಬಂದ ಜಾನಿ ಬೈರಿಸ್ಟೋ ಕೂಡ ಶೂನ್ಯ ಸುತ್ತಿದರು. ಇನ್ನು ಪಂದ್ಯದ ಆರಂಭದಲ್ಲೇ ರವೀಂದ್ರ ಜಡೇಜಾ 23 ರನ್ ಸಿಡಿಸಿದ ಕೆಟನ್ ಜೆನ್ನಿಂಗ್ಸ್  ವಿಕೆಟ್ ಕಬಳಿಸಿದ್ದರು. 

 ಈ ಮೂಲಕ ಇಂಗ್ಲೆಂಡ್ 134 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಮೊದಲ ದಿನವೇ ಇಂಗ್ಲೆಂಡ್ ದಿಟ್ಟ ಹೋರಾಟ ನೀಡಿ  ಟೀಂ ಇಂಡಿಯಾ ಚಿಂತೆಗೆ ಕಾರಣವಾಗಿತ್ತು. ಆದರೆ ಕೊಹ್ಲಿ ಸೈನ್ಯ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ.