ಯೋ-ಯೋ ಟೆಸ್ಟ್ ರಾಯುಡು ಫೇಲ್-ಮತ್ತೊರ್ವ ಸಿಎಸ್‌ಕೆ ಆಟಗಾರನಿಗೆ ಚಾನ್ಸ್
ಇಂಗ್ಲೆಂಡ್ ಪ್ರವಾಸದಲ್ಲಿನ ಏಕದಿನ ಸರಣಿಗೆ ಆಯ್ಕೆಯಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಅಂಬಾಟಿ ರಾಯುಡು ಯೋ-ಯೋ ಟೆಸ್ಟ್‌ನಲ್ಲಿ ಫೇಲ್ ಆದ ಕಾರಣ, ಇದೀಗ ಮತ್ತೊರ್ವ ಸಿಎಸ್‌ಕೆ ಆಟಗಾರನಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. 3 ವರ್ಷಗಳ ಬಳಿಕ ಭಾರತ ತಂಡ ಸೇರಿಕೊಂಡ ಆ ಸಿಎಸ್‌ಕೆ ಆಟಗಾರ ಯಾರು?
ಮುಂಬೈ(ಜೂ.17): ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರೋ ಟೀಂ ಇಂಡಿಯಾ ಕ್ರಿಕೆಟಿಗರ ಯೋ-ಯೋ ಟೆಸ್ಟ್ ಫಲಿತಾಂಶಗಳು ಹೊರಬೀಳುತ್ತಿದೆ. ಇದರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದಿದ್ದಅಂಬಾಟಿ ರಾಯುಡು ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಹೀಗಾಗಿ ರಾಯುಡು ಸ್ಥಾನಕ್ಕೆ ಮತ್ತೊರ್ವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಆಯ್ಕೆಯಾಗಿದ್ದಾರೆ.
ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಬುತ ಪ್ರದರ್ಶನ ನೀಡಿದ್ದ ಅಂಬಾಟಿ ರಾಯುಡು, ಟೀಂ ಇಂಡಿಯಾಗೆ ವಾಪಾಸ್ಸಾಗುವಲ್ಲಿ ಯಶಸ್ವಿಯಾಗಿದ್ದರು. 2016ರಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಪಂದ್ಯವಾಡಿದ್ದ ರಾಯುಡು ಬರೋಬ್ಬರಿ 2 ವರ್ಷಗಳ ಬಳಿಕ ತಂಡ ಸೇರಿಕೊಂಡಿದ್ದರು. ಆದರೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಯೋ-ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ರಾಯುಡು ಫೇಲ್ ಆಗಿದ್ದಾರೆ.
ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆಯಿಂದ ಏಕದಿನ ಕ್ರಿಕೆಟ್ ತಂಡದಿಂದ ದೂರ ಉಳಿದಿದ್ದ ರೈನಾ ಇದೀಗ 3 ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡಿದ್ದಾರೆ. 2015ರಲ್ಲಿ ಸೌತ್ಆಫ್ರಿಕಾ ವಿರುದ್ಧ ರೈನಾ ಅಂತಿಮ ಏಕದಿನ ಪಂದ್ಯ ಆಡಿದ್ದರು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸುರೇಶ್ ರೈನಾ 15 ಪಂದ್ಯಗಳಲ್ಲಿ 445 ರನ್ ಸಿಡಿಸಿದ್ದರು. ಇದರಲ್ಲಿ ನಾಲ್ಕು ಅರ್ಧಶತಕಗಳು ದಾಖಲಾಗಿವೆ.