ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯ ಅಭಿಮಾನಿಗಳ ಕುತೂಹಲವನ್ನ ಇಮ್ಮಡಿಗೊಳಿಸಿದೆ. ಭಾರತಕ್ಕೆ ಸರಣಿ ಉಳಿಸಿಕೊಳ್ಳೋ ಚಿಂತೆಯಾದರೆ, ಆಸ್ಟ್ರೇಲಿಯಾ ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ಹಾಗಾದರೆ ಇಂದು ಗೆಲುವು ಯಾರಿಗೆ? ಟೀಂ ಇಂಡಿಯಾದಲ್ಲಿನ ಬದಲಾವಣೆ ಏನು? ಇಲ್ಲಿದೆ.
ಮೆಲ್ಬರ್ನ್(ನ.23): ಮೊದಲ ಪಂದ್ಯದಲ್ಲಿ ಅನುಭವಿಸಿದ ಸೋಲಿನ ಆಘಾತದಿಂದ ಹೊರಬರಲು ಭಾರತ ತಂಡ ಪಣತೊಟ್ಟಿದ್ದು, ಶುಕ್ರವಾರ ಇಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆಯಲಿರುವ 2ನೇ ಟಿ20 ಪಂದ್ಯವನ್ನು ಗೆದ್ದು ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಒತ್ತಡದಲ್ಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಗೆದ್ದ ಆಸ್ಪ್ರೇಲಿಯಾ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಭಾರತಕ್ಕೆ ಗೆಲುವಿನ ಓಟಕ್ಕೆ ತಡೆಯೊಡ್ಡುವ ಉತ್ಸಾಹ ತೋರುತ್ತಿದೆ.
ಸತತ 7 ಟಿ20 ಸರಣಿಗಳನ್ನು ಗೆದ್ದಿರುವ ಭಾರತ, ಈ ಪಂದ್ಯ ಸೋತರೆ ತಂಡದ ನಾಗಾಲೋಟಕ್ಕೆ ತೆರೆಬೀಳಲಿದೆ. ಹೀಗಾಗಿ, ಮೊದಲ ಪಂದ್ಯದಲ್ಲಿ ಆದ ತಪ್ಪುಗಳನ್ನು ತಿದ್ದಿಕೊಳ್ಳಲು ಹೆಚ್ಚು ಸಮಯವಿಲ್ಲದಿದ್ದರೂ, ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುವುದು ಅನಿವಾರ್ಯ ಎನಿಸಿದೆ.
ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ. 3ನೇ ಕ್ರಮಾಂಕವನ್ನು ಕೆ.ಎಲ್.ರಾಹುಲ್‌ಗೆ ಬಿಟ್ಟುಕೊಟ್ಟು, 4ನೇ ಕ್ರಮಾಂಕದಲ್ಲಿ ಆಡುವ ಕೊಹ್ಲಿಯ ತಂತ್ರ ಕೈಹಿಡಿಯುತ್ತಿಲ್ಲ. ಕಳೆದ 6 ಪಂದ್ಯಗಳಲ್ಲಿ ರಾಹುಲ್ 30 ರನ್ ದಾಟಿಲ್ಲ. ಕೊಹ್ಲಿ 3ನೇ ಕ್ರಮಾಂಕಕ್ಕೆ ಮರಳಿ, ರಾಹುಲ್‌ರನ್ನು ಕೆಳ ಕ್ರಮಾಂಕದಲ್ಲಿ ಆಡಿಸಬಹುದು. ಇಲ್ಲವೇ ಅವರ ಬದಲಿಗೆ ಮನೀಶ್ ಪಾಂಡೆಗೆ ಅವಕಾಶ ಸಿಕ್ಕರೆ ಅಚ್ಚರಿಯಿಲ್ಲ.
ಆಲ್ರೌಂಡರ್ ಜವಾಬ್ದಾರಿಯನ್ನು ಕೃನಾಲ್ ಪಾಂಡ್ಯ ನಿಭಾಯಿಸಲು ವಿಫಲರಾಗಿರುವುದು, ಅವರ ಮೇಲೆ ಒತ್ತಡ ಹೆಚ್ಚುವಂತೆ ಮಾಡಿದೆ. ಆದರೂ ಮೆಲ್ಬರ್ನ್ ಕ್ರಿಕೆಟ್ ಮೈದಾನ, ದೊಡ್ಡ ಮೈದಾನಗಳಲ್ಲಿ ಒಂದೆನಿಸಿರುವ ಕಾರಣ, ಭಾರತ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವುದು ಸೂಕ್ತ ಎನಿಸಿದೆ. ವೇಗಿ ಖಲೀಲ್ ಕೈಬಿಟ್ಟು ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ ಸಹ ಭಾರತದ ಸೋಲಿಗೆ ಕಾರಣವಾಗಿತ್ತು. ತಂಡ ಫೀಲ್ಡಿಂಗ್ ವಿಭಾಗದಲ್ಲಿ ಸುಧಾರಣೆ ಕಾಣುವ ವಿಶ್ವಾಸದಲ್ಲಿದೆ.
ರಿಷಭ್ ಪಂತ್ ಮತ್ತಷ್ಟುಜವಾಬ್ದಾರಿಯಿಂದ ಆಡಬೇಕಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ರನ್ ಕೊಡುಗೆ ತಂಡಕ್ಕೆ ಎಷ್ಟುಮಹತ್ವದ್ದಾಗಲಿದೆ ಎನ್ನುವುದು ಮತ್ತೆ ಸಾಬೀತಾಗಿದ್ದು, ನಾಯಕ ಹಾಗೂ ಉಪನಾಯಕನ ಮೇಲೆ ತಂಡ ಹೆಚ್ಚು ನಿರೀಕ್ಷೆ ಇರಿಸಿದೆ. ಶಿಖರ್ ಧವನ್ ಉತ್ತಮ ಲಯದಲ್ಲಿರುವುದು ತಂಡದ ಪಾಲಿಗೆ ಸಿಹಿ ಸುದ್ದಿ.
ಮತ್ತೊಂದೆಡೆ ಬ್ರಿಸ್ಬೇನ್ ಗೆಲುವು ಆಸ್ಪ್ರೇಲಿಯಾಗೆ ಕಳೆದ 23 ಪಂದ್ಯಗಳಲ್ಲಿ ಕೇವಲ ಆರನೇಯದ್ದು. ಈ ಪೈಕಿ 3 ಗೆಲುವು ಜಿಂಬಾಬ್ವೆ ಹಾಗೂ ಯುಎಇ ವಿರುದ್ಧ ದಾಖಲಾಗಿದ್ದು. ಭಾರತದಂತಹ ಬಲಿಷ್ಠ ತಂಡದ ಎದುರು ಬಹುನಿರೀಕ್ಷಿತ ಸರಣಿಯ ಮೊದಲ ಪಂದ್ಯವನ್ನು ಗೆದ್ದಿರುವುದು, ಆಸೀಸ್ ಆತ್ಮಬಲವನ್ನು ಎಷ್ಟರ ಮಟ್ಟಿಗೆ ಹೆಚ್ಚಿಸಿರಬಹುದು ಎಂದು ಊಹಿಸಲು ಸಹ ಕಷ್ಟ. ಮೆಲ್ಬರ್ನ್‌ನಲ್ಲಿ ಕೆಲ ದಿನಗಳಿಂದ ಮಳೆ ವಾತಾವರಣವಿದ್ದು, ಈ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಸಂಭವನೀಯ ತಂಡ
ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ, ಭುವನೇಶ್ವರ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್.
ಆಸ್ಪ್ರೇಲಿಯಾ: ಆ್ಯರೋನ್ ಫಿಂಚ್ (ನಾಯಕ), ಡಾರ್ಚಿ ಶಾರ್ಟ್, ಕ್ರಿಸ್ ಲಿನ್, ಮ್ಯಾಕ್ಸ್‌ವೆಲ್, ಸ್ಟೋಯ್ನಿಸ್, ಬೆನ್ ಮೆಕ್‌ಡೆರ್ಮೊಟ್, ಅಲೆಕ್ಸ್ ಕಾರಿ, ಆ್ಯಂಡ್ರೂ ಟೈ, ಆ್ಯಡಂ ಜಂಪಾ, ಬೆಹ್ರೆನ್‌ಡ್ರಾಫ್, ಸ್ಟ್ಯಾನ್‌ಲೇಕ್.
ಪಂದ್ಯ ಆರಂಭ: ಮಧ್ಯಾಹ್ನ 1.20ಕ್ಕೆ, ನೇರ ಪ್ರಸಾರ: ಸೋನಿ ಸಿಕ್ಸ್
ಪಿಚ್ ರಿಪೋರ್ಟ್
ಎಂಸಿಜಿ ಸಹ ದೊಡ್ಡ ಕ್ರೀಡಾಂಗಣವಾಗಿದ್ದು, ಸ್ಪಿನ್ನರ್‌ಗಳ ಪಾತ್ರ ಪ್ರಮುಖವೆನಿಸಲಿದೆ. ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದರೂ, ಮಳೆ ವಾತಾವರಣವಿರುವ ಕಾರಣ ಚೆಂಡು ಬ್ಯಾಟ್‌ಗೆ ನಿರೀಕ್ಷಿತ ವೇಗದಲ್ಲಿ ಬರದಿರುವ ಸಾಧ್ಯತೆ ಹೆಚ್ಚು.
