ಹೈದರಾಬಾದ್‌(ಮಾ.02): ಐಸಿಸಿ ಏಕದಿನ ವಿಶ್ವಕಪ್‌ಗೆ ಕಡೆ ಹಂತದ ತಯಾರಿ ನಡೆಸುತ್ತಿರುವ ಭಾರತ ತಂಡ, ಶನಿವಾರದಿಂದ ಆರಂಭಗೊಳ್ಳಲಿರುವ ಆಸ್ಪ್ರೇಲಿಯಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಕಿ ಇರುವ 2 ಸ್ಥಾನಗಳಿಗೆ ಸೂಕ್ತ ಆಟಗಾರರನ್ನು ಆಯ್ಕೆ ಮಾಡುವತ್ತ ಗಮನ ಹರಿಸಲಿದೆ. ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ, ಗೆಲುವಿನೊಂದಿಗೆ ಸರಣಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ.

"

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ: ಭಾರತಕ್ಕೆ 6 ವಿಕೆಟ್ ರೋಚಕ ಗೆಲುವು

2 ಪಂದ್ಯಗಳ ಟಿ20 ಸರಣಿಯಲ್ಲಿ 0-2ರಿಂದ ಸೋಲುಂಡರೂ, ಭಾರತ ತನ್ನ ಪ್ರಯೋಗಗಳಿಗೆ ಕಡಿವಾಣ ಹಾಕುವ ಸಾಧ್ಯತೆ ಕಡಿಮೆ. 2ನೇ ಟಿ20 ಬಳಿಕ ನಾಯಕ ವಿರಾಟ್‌ ಕೊಹ್ಲಿ, ‘ಪ್ರತಿ ತಂಡವೂ ವಿಶ್ವಕಪ್‌ಗೂ ಮುನ್ನ ಬಲಿಷ್ಠ ತಂಡವನ್ನು ರಚಿಸಿಕೊಳ್ಳಲು ಎದುರು ನೋಡುತ್ತದೆ. ಏಕದಿನ ಸರಣಿಯಲ್ಲೂ ನಾವು ಕೆಲ ಪ್ರಯೋಗಗಳನ್ನು ನಡೆಸುತ್ತೇವೆ. ಆದರೆ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿರಲಿದೆ’ ಎಂದು ಹೇಳಿದ್ದರು.

ವಿಶ್ವಕಪ್‌ಗೆ ಪ್ರವೇಶ ಪತ್ರ ಪಡೆಯಲು ನಾಲ್ವರು ಆಟಗಾರರಿಗೆ ಈ ಸರಣಿಯು ಕಿರು ಪರೀಕ್ಷೆಯಂತೆ ತೋರಲಿದೆ. ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ವಿಜಯ್‌ ಶಂಕರ್‌ ಹಾಗೂ ಸಿದ್ಧಾಥ್‌ರ್‍ ಕೌಲ್‌ ಲಭ್ಯವಿರುವ 2 ಸ್ಥಾನಗಳಿಗಾಗಿ ಪೈಪೋಟಿ ನಡೆಸಲಿದ್ದಾರೆ. ಈ ನಾಲ್ವರ ಪ್ರದರ್ಶನದ ಮೇಲೆ ಎಲ್ಲರಿಗಿಂತ ಹೆಚ್ಚಾಗಿ ದಿನೇಶ್‌ ಕಾರ್ತಿಕ್‌ ಕಣ್ಣಿಡಲಿದ್ದು, ಇಂಗ್ಲೆಂಡ್‌ಗೆ ಪ್ರಯಾಣಿಸಲಿರುವ 15 ಸದಸ್ಯರ ತಂಡದಲ್ಲಿ ಸ್ಥಾನ ಗಿಟ್ಟಿಸಲು ಕಾರ್ತಿಕ್‌ ಸಹ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸುಪ್ರೀಂ ತೀರ್ಪಿನ ಮೇಲೆ ಶ್ರೀಶಾಂತ್ ಭವಿಷ್ಯ- BCCIಗೆ ಶುರುವಾಯ್ತು ಆತಂಕ!

ಟಿ20 ಸರಣಿಯಲ್ಲಿ ಕ್ರಮವಾಗಿ 50 ಹಾಗೂ 47 ರನ್‌ ಗಳಿಸಿದ ರಾಹುಲ್‌ ಉತ್ತಮ ಲಯದಲ್ಲಿದ್ದಾರೆ. ಮೀಸಲು ಆರಂಭಿಕ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ರಾಹುಲ್‌ ಎದುರು ನೋಡುತ್ತಿದ್ದು, ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಕಾತರಿಸುತ್ತಿದ್ದಾರೆ. ಶಿಖರ್‌ ಧವನ್‌ರ ಅಸ್ಥಿರ ಪ್ರದರ್ಶನದ ಕಾರಣ ರಾಹುಲ್‌ಗೆ ಕಾಯಂ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ. ಕೊಹ್ಲಿ, ತಾವು 4ನೇ ಕ್ರಮಾಂಕದಲ್ಲಿ ಆಡಲು ಹಿಂಜರಿಯುವುದಿಲ್ಲ ಎಂದಿದ್ದು, ರೋಹಿತ್‌-ಧವನ್‌ ಆರಂಭಿಕರಾಗಿ ಆಡಿ, ರಾಹುಲ್‌ಗೆ 3ನೇ ಕ್ರಮಾಂಕ ದೊರೆಯುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ರಿಷಭ್‌ ಪಂತ್‌ ಸಹ ಸ್ಥಿರತೆ ಕಾಯ್ದುಕೊಳ್ಳಲು ವಿಫಲರಾಗಿದ್ದಾರೆ. ಆದರೆ ಅವರು ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಕಾರಣ ಹೆಚ್ಚಿನ ಅವಕಾಶ ನೀಡಲು ತಂಡದ ಆಡಳಿತ ನಿರ್ಧರಿಸಿದೆ. ಮೀಸಲು ಕೀಪರ್‌ ಆಗಿಯೂ ಪಂತ್‌ ತಂಡದಲ್ಲಿ ಉಳಿಯುವ ಸಾಧ್ಯತೆ ಹೆಚ್ಚು. ಹಾರ್ದಿಕ್‌ ಪಾಂಡ್ಯ ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ಕಾರಣ, ವಿಜಯ್‌ ಶಂಕರ್‌ಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಮತ್ತೊಂದು ಅವಕಾಶ ಸಿಗಲಿದೆ. 4ನೇ ವೇಗಿ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ಸಿದ್ಧಾಥ್‌ರ್‍ ಉತ್ಸುಕರಾಗಿದ್ದಾರೆ. ಮೊದಲೆರಡು ಪಂದ್ಯಗಳಿಗೆ ಮಾತ್ರ ಅವರು ಆಯ್ಕೆ ಆಗಿದ್ದು, 3ನೇ ಪಂದ್ಯಕ್ಕೆ ಭುವನೇಶ್ವರ್‌ ವಾಪಸಾಗಲಿದ್ದು, ಕೌಲ್‌ ತಮಗೆ ಸಿಗುವ ಸೀಮಿತ ಅವಕಾಶಗಳಲ್ಲೇ ಪರಿಣಾಮಕಾರಿ ಆಟವಾಡಬೇಕಿದೆ.

ಟಿ20 ಸರಣಿಯಲ್ಲಿ ಆಡದ ಅಂಬಟಿ ರಾಯುಡು, ಕೇದಾರ್‌ ಜಾಧವ್‌, ಮೊಹಮದ್‌ ಶಮಿ ತಂಡ ಕೂಡಿಕೊಂಡಿದ್ದು, ಆಸ್ಪ್ರೇಲಿಯನ್ನರಿಗೆ ಹೊಸ ಸವಾಲು ಎದುರಾಗಲಿದೆ. ಪ್ರಮುಖವಾಗಿ ಜಾಧವ್‌ರ ಅಸಾಂಪ್ರದಾಯಿಕ ಬೌಲಿಂಗ್‌ ಶೈಲಿ ಕಾಂಗರೂಗಳನ್ನು ಕಂಗೆಡಿಸಿದರೆ ಅಚ್ಚರಿಯಿಲ್ಲ.

ಇದನ್ನೂ ಓದಿ: ಚೇತರಿಸಿಕೊಂಡ ಸ್ಮಿತ್-IPL ಟೂರ್ನಿಗೆ ಕಮ್‌ಬ್ಯಾಕ್?

ಮಾರ್ಷ್ ಅನುಪಸ್ಥಿತಿ: 11 ವರ್ಷಗಳ ಬಳಿಕ ಭಾರತ ವಿರುದ್ಧ ಟಿ20 ಸರಣಿ ಗೆದ್ದ ಸಂಭ್ರಮದಲ್ಲಿರುವ ಆಸ್ಪ್ರೇಲಿಯಾಗೆ ಮೊದಲ ಪಂದ್ಯದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ ಶಾನ್‌ ಮಾರ್ಷ್ ಅನುಪಸ್ಥಿತಿ ಕಾಡಲಿದೆ. ಆದರೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಪ್ರಚಂಡ ಲಯದಲ್ಲಿದ್ದು, ತಂಡದ ಬಲ ಹೆಚ್ಚಿಸಿದೆ. ನೇಥನ್‌ ಲಯನ್‌ ಸಹ ಕಣಕ್ಕಿಳಿಯುವ ನಿರೀಕ್ಷೆ ಇದೆ. ಆ್ಯರೋನ್‌ ಫಿಂಚ್‌ ತಂಡವನ್ನು ಮುನ್ನಡೆಸಲಿದ್ದು, ವಿಶ್ವಕಪ್‌ಗೂ ಮುನ್ನ ಹಾಲಿ ಚಾಂಪಿಯನ್‌ ತಂಡ ಪೂರ್ಣ ಬಲಕ್ಕೆ ಮರಳಲು ಕಾತರಿಸುತ್ತಿದೆ.

ತಂಡಗಳ ವಿವರ
ಭಾರತ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ಅಂಬಟಿ ರಾಯುಡು, ಎಂ.ಎಸ್‌.ಧೋನಿ, ರಿಷಭ್‌ ಪಂತ್‌, ಕೇದಾರ್‌ ಜಾಧವ್‌, ವಿಜಯ್‌ ಶಂಕರ್‌, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ, ಸಿದ್ಧಾಥ್‌ರ್‍ ಕೌಲ್‌.

ಆಸ್ಪ್ರೇಲಿಯಾ: ಆ್ಯರೋನ್‌ ಫಿಂಚ್‌ (ನಾಯಕ), ಡಾರ್ಚಿ ಶಾರ್ಟ್‌, ಮಾರ್ಕಸ್‌ ಸ್ಟೋಯ್ನಿಸ್‌, ಉಸ್ಮಾನ್‌ ಖವಾಜ, ಅಲೆಕ್ಸ್‌ ಕಾರ್ರಿ, ಪೀಟರ್‌ ಹ್ಯಾಂಡ್ಸ್‌ಕಂಬ್‌, ಆ್ಯಸ್ಟನ್‌ ಟರ್ನರ್‌, ಆ್ಯಡಂ ಜಂಪಾ, ಜೇಸನ್‌ ಬೆಹ್ರನ್‌ಡೊಫ್‌ರ್‍, ಜಾಯಿ ರಿಚರ್ಡ್‌ಸನ್‌, ಪ್ಯಾಟ್‌ ಕಮಿನ್ಸ್‌, ಆ್ಯಂಡ್ರೂ ಟೈ, ನೇಥನ್‌ ಲಯನ್‌, ನೇಥನ್‌ ಕೌಲ್ಟರ್‌-ನೈಲ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ 1

ಒಟ್ಟು ಮುಖಾಮುಖಿ: 131

ಭಾರತ: 47

ಆಸ್ಪ್ರೇಲಿಯಾ: 74

ಐಸಿಸಿ ರಾರ‍ಯಂಕಿಂಗ್‌

ಭಾರತ: 02

ಆಸ್ಪ್ರೇಲಿಯಾ: 06

ಪಿಚ್‌ ರಿಪೋರ್ಟ್‌
ಹೈದರಾಬಾದ್‌ ಪಿಚ್‌ ಸಾಮಾನ್ಯವಾಗಿ ಬ್ಯಾಟಿಂಗ್‌ ಸ್ನೇಹಿಯಾಗಿರಲಿದೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 286 ರನ್‌ ಇದ್ದು, ಶನಿವಾರದ ಪಂದ್ಯದಲ್ಲೂ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ನೆರವು ಪಡೆಯುವ ನಿರೀಕ್ಷೆ ಇದೆ. ಸ್ಥಳೀಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಭಾರತ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ ಎನ್ನಲಾಗಿದೆ.

ಅಭ್ಯಾಸದ ವೇಳೆ ಧೋನಿ ಕೈಗೆ ಪೆಟ್ಟು!
ಶುಕ್ರವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿಯ ಮೊಣಕೈಗೆ ಪೆಟ್ಟು ಬಿತ್ತು. ಸಹಾಯಕ ಸಿಬ್ಬಂದಿ ರಾಘವೇಂದ್ರ ಎಸೆತ ಚೆಂಡು ಮೊಣಕೈಗೆ ಬಿದ್ದ ಕಾರಣ, ಧೋನಿ ನೋವಿನಿಂದ ಬಳಲಿದರು. ಸುರಕ್ಷತೆ ದೃಷ್ಟಿಯಿಂದ ಅವರು ಅಭ್ಯಾಸ ಮುಂದುವರಿಸದಿರಲು ನಿರ್ಧರಿಸಿದರು. ಮೊದಲ ಏಕದಿನ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಪಂದ್ಯಕ್ಕೂ ಮುನ್ನ ನಿರ್ಧರಿಸುವುದಾಗಿ ತಂಡದ ಮೂಲಗಳು ತಿಳಿಸಿವೆ.

02
ಹೈದರಾಬಾದ್‌ನಲ್ಲಿ ಭಾರತ ವಿರುದ್ಧ ಆಸ್ಪ್ರೇಲಿಯಾ 2 ಏಕದಿನ ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಗೆದ್ದಿದೆ.

01
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350 ಸಿಕ್ಸರ್‌ ಪೂರೈಸಲು ರೋಹಿತ್‌ ಶರ್ಮಾಗೆ ಕೇವಲ 1 ಸಿಕ್ಸರ್‌ನ ಅಗತ್ಯವಿದೆ.