ಭಾರತದ ಮೊದಲ ಇನ್ನಿಂಗ್ಸಲ್ಲಿ ಜಡೇಜಾ, ಕೆಎಲ್ ರಾಹುಲ್ ಮತ್ತು ಚೇತೇಶ್ವರ್ ಪೂಜಾರ ಅರ್ಧಶತಕ ಗಳಿಸಿದರು.
ಧರ್ಮಶಾಲಾ(ಮಾ. 27): ಸರಣಿ ಗೆಲ್ಲುವ ಸನ್ನಾಹದಲ್ಲಿರುವ ಟೀಮ್ ಇಂಡಿಯಾ ಇಂದು ಕಾಂಗರೂಗಳ ಪಡೆಯ ಬ್ಯಾಟುಗಾರರನ್ನು ಹೆಡೆಮುರಿಕಟ್ಟಿ ಮಲಗಿಸಿದೆ. 32 ರನ್'ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆಡಿದ ಆಸ್ಟ್ರೇಲಿಯಾ ಕೇವಲ 137 ರನ್'ಗೆ ಆಲೌಟ್ ಆಗಿದೆ. ಭಾರತೀಯ ಬೌಲರ್'ಗಳ ಗಾಳಕ್ಕೆ ಸಿಕ್ಕ ಕಾಂಗರೂಗಳ ಪಡೆ ತತ್ತರಿಸಿಹೋಯಿತು. ಗ್ಲೆನ್ ಮ್ಯಾಕ್ಸ್'ವೆಲ್ ಮತ್ತು ಮ್ಯಾಥ್ಯೂ ವೇಡ್ ಹೊರತುಪಡಿಸಿ ಉಳಿದ ಆಸ್ಟ್ರೇಲಿಯನ್ನರು ಪೇಲವವಾಗಿ ಔಟಾದರು. ಉಮೇಶ್ ಯಾದವ್, ಜಡೇಜಾ ಮತ್ತು ಅಶ್ವಿನ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ತಲಾ 3 ವಿಕೆಟ್ ಸಂಪಾದಿಸಿದರು.
ಇದಕ್ಕೂ ಮುನ್ನ, ಭಾರತ ತಂಡ 6 ವಿಕೆಟ್ ನಷ್ಟಕ್ಕೆ 248 ರನ್'ಗಳೊಂದಿಗೆ 3ನೇ ದಿನದಾಟ ಆರಂಭಿಸಿತು. ವೃದ್ಧಿಮಾನ್ ಸಾಹಾ ಮತ್ತು ರವೀಂದ್ರ ಜಡೇಜಾ ಇಬ್ಬರೂ ಹಿಂದಿನ ದಿನದ ಉತ್ತಮ ಆಟವನ್ನು ಮುಂದುವರಿಸಿದರು. ಇಬ್ಬರೂ ತಂಡದ ಸ್ಕೋರನ್ನು 300 ರನ್ ಗಡಿ ದಾಟಿಸಿದಾಗ ಭಾರತ ತಂಡ ದೊಡ್ಡ ಮುನ್ನಡೆ ಗಳಿಸುವ ಸೂಚನೆ ಇತ್ತು. ಆದರೆ, ಕೇವಲ 1 ರನ್ ಅಂತರದಲ್ಲಿ ಸಾಲು ಸಾಲಾಗಿ 3 ವಿಕೆಟ್ ಪತನಗೊಂಡವು. ಕುಲದೀಪ್ ಯಾದವ್ ಮತ್ತು ಉಮೇಶ್ ಯಾದವ್ ಇಬ್ಬರೂ ತಂಡದ ಸ್ಕೋರನ್ನು 332 ರನ್'ಗೆ ನೂಕಿದರು. ಭಾರತದ ಮೊದಲ ಇನ್ನಿಂಗ್ಸಲ್ಲಿ ಜಡೇಜಾ, ಕೆಎಲ್ ರಾಹುಲ್ ಮತ್ತು ಚೇತೇಶ್ವರ್ ಪೂಜಾರ ಅರ್ಧಶತಕ ಗಳಿಸಿದರು. ರಹಾನೆ, ಅಶ್ವಿನ್ ಮತ್ತು ಸಾಹಾ ಅವರೂ ಉಪಯುಕ್ತ ರನ್ ಕೊಡುಗೆ ನೀಡಿದರು.
ಆಸ್ಟ್ರೇಲಿಯಾದ ನೇಥನ್ ಲಯೋನ್ 5 ವಿಕೆಟ್ ಗಳಿಸಿದ್ದು ವಿಶೇಷ. ವೇಗದ ಬೌಲರ್ ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರು. ಇನ್ನು, ಮೂರನೇ ದಿನಾಂತ್ಯದಲ್ಲಿ ಭಾರತ ತನ್ನ ಎರಡನೇ ಇನ್ನಿಂಗ್ಸಲ್ಲಿ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದೆ. ಗೆಲುವಿಗೆ ಭಾರತಕ್ಕಿನ್ನು 87 ರನ್ ಬೇಕಿದೆ.
ಸ್ಕೋರು ವಿವರ(3ನೇ ದಿನದಾಟ):
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 88.3 ಓವರ್ 300 ರನ್ ಆಲೌಟ್
(ಸ್ಟೀವ್ ಸ್ಮಿತ್ 111, ಮ್ಯಾಥ್ಯೂ ವೇಡ್ 57, ಡೇವಿಡ್ ವಾರ್ನರ್ 56, ಪ್ಯಾಟ್ ಕುಮಿನ್ಸ್ 21 ರನ್ - ಕುಲದೀಪ್ ಯಾದವ್ 68/4, ಉಮೇಶ್ ಯಾದವ್ 69/2)
ಭಾರತ ಮೊದಲ ಇನ್ನಿಂಗ್ಸ್ 118.1 ಓವರ್ 332 ರನ್ ಆಲೌಟ್
(ರವೀಂದ್ರ ಜಡೇಜಾ 63, ಕೆಎಲ್ ರಾಹುಲ್ 60, ಚೇತೇಶ್ವರ್ ಪೂಜಾರ 57, ಅಜಿಂಕ್ಯ ರಹಾನೆ 46, ವೃದ್ಧಿಮಾನ್ ಸಾಹಾ 31, ಆರ್.ಅಶ್ವಿನ್ 30 ರನ್ - ನೇಥನ್ ಲಯನ್ 92/5, ಪ್ಯಾಟ್ ಕಮಿನ್ಸ್ 94/3)
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 53.5 ಓವರ್ 137 ರನ್ ಆಲೌಟ್
(ಗ್ಲೆನ್ ಮ್ಯಾಕ್ಸ್'ವೆಲ್ 45, ಮ್ಯಾಥ್ಯೂ ವೇಡ್ ಅಜೇಯ 25 ರನ್ - ರವೀಂದ್ರ ಜಡೇಜಾ 24/3, ಆರ್.ಅಶ್ವಿನ್ 29/3, ಉಮೇಶ್ ಯಾದವ್ 29/3)
ಭಾರತ ಎರಡನೇ ಇನ್ನಿಂಗ್ಸ್ 6 ಓವರ್ 19/0
(ಕೆಎಲ್ ರಾಹುಲ್ ಅಜೇಯ 13 ರನ್)
