ಬೆಂಗಳೂರು(ಜೂ.15): ಭಾರತ ವಿರುದ್ಧ ಟೆಸ್ಟ್ ಪಂದ್ಯ ಆಡೋ ಮೂಲಕ ಇತಿಹಾಸ ನಿರ್ಮಿಸಿದ ಅಫ್ಘಾನಿಸ್ತಾನ ಇದೀಗ ಪಂದ್ಯವನ್ನ 3ನೇ ದಿನಕ್ಕೆ ಕೊಂಡೊಯ್ಯಲು ಪರದಾಡುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿವೆ.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಸಿಡಿಸಿತ್ತು. ಇದಕ್ಕುತ್ತರವಾಗಿ 2ನೇ ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ಕೇವಲ 27.5 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಯಿತು. ಕನಿಷ್ಠ ಮೊತ್ತಕ್ಕೆ ಕುಸಿದ ಅಫ್ಘಾನಿಸ್ತಾನ 365 ರನ್‌ಗಳ ಹಿನ್ನಡೆ ಅನುಭವಿಸಿತು. ಹೀಗಾಗಿ ಫಾಲೋ ಆನ್ ಪಡೆದ ಅಫ್ಘಾನ್ 2ನೇ ಇನ್ನಿಂಗ್ಸ್‌ನಲ್ಲೂ ಮತ್ತದೇ ಪೆವಿಲಿಯನ್ ಪರೇಡ್ ನಡೆಸುತ್ತಿದೆ.

 

 

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ ವಿಕೆಟ್ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. 19 ರನ್ ಗಳಿಸುವಷ್ಟರಲ್ಲೇ ಅಫ್ಘಾನ್ ಮೊದಲ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಶೆಹಝಾದ್, ಜಾವೇದ್ ಅಹಮ್ಮದಿ, ಮೊಹಮ್ಮದ್ ನಬಿ ಹಾಗೂ ಮೊಹಮ್ಮದ್ ನಬಿ ಔಟಾಗಿದ್ದಾರೆ. 

4 ವಿಕೆಟ್ ಕಳೆದುಕೊಂಡಿರುವ ಅಫ್ಘಾನಿಸ್ತಾನ 2ನೇ ದಿನ ಅಥವಾ 3ನೇ ದಿನದಾಟದ ಮೊದಲ ಸೆಶನ್‌ನಲ್ಲಿ ಆಲೌಟ್ ಆಗೋ ಲಕ್ಷಣ ಕಾಣಿಸ್ತಿದೆ. ಅದ್ಬುತ ಬೌಲಿಂಗ್ ದಾಳಿ ನಡೆಸುತ್ತಿರುವ ಭಾರತ, ಬಹುಬೇಗನೆ ಟೆಸ್ಟ್ ಮುಗಿಸಿ ವಿಶ್ರಾಂತಿ ಪಡೆಯೋ ಲೆಕ್ಕಾಚಾರದಲ್ಲಿದೆ.