ಮುಂಬೈ(ಮೇ.30) ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದ ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ತಂಡದಿಂದ ಹೊರಬಿದ್ದಿದ್ದಾರೆ. ಐಪಿಎಲ್ ಪಂದ್ಯದ ವೇಳೆ ಕೈಬೆರಳಿಗೆ ಗಾಯ ಮಾಡಿಕೊಂಡಿರುವ ಸಾಹಗೆ, ಕನಿಷ್ಠ 5 ರಿಂದ 6 ವಾರಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಜೂನ್ 14 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯದ ಸರಣಿಗೆ ಸಾಹ ಬದಲು ದಿನೇಶ್ ಕಾರ್ತಿಕ್ ಅಥವಾ ಪಾರ್ಥೀವ್ ಪಟೇಲ್ ಆಯ್ಕೆಯಾಗೋ ಸಾಧ್ಯತೆ ಇದೆ. 

2018ರ ಸೌತ್‌ಆಫ್ರಿಕಾ ಪ್ರವಾಸದ ವೇಳೆ ಗಾಯಕ್ಕೆ ತುತ್ತಾಗಿದ್ದ ವೃದ್ಧಿಮಾನ್ ಸಾಹ ಇದೀಗ 2ನೇ ಬಾರಿ ಗಾಯಗೊಂಡಿದ್ದಾರೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ದೃಷ್ಟಿಯಿಂದ ವೃದ್ಧಿಮಾನ್ ಸಾಹಗೆ ಹೆಚ್ಚಿನ ವಿಶ್ರಾಂತಿ ನೀಡಲಾಗುವುದು ಎಂದು ಬಿಸಿಸಿಐ ಹೇಳಿದೆ. ಆಗಸ್ಟ್‌ನಲ್ಲಿ ಟೀಮ್ಇಂಡಿಯಾ 5 ಟೆಸ್ಟ್ ಪಂದ್ಯದ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳದೆ. ಸದ್ಯ ಆಯ್ಕೆ ಸಮಿತಿ ಮುಂದೆ ಹಿರಿಯ ವಿಕೆಟ್ ಕೀಪರ್‌ಗಳಾದ ದಿನೇಶ್ ಕಾರ್ತಿಕ್ ಹಾಗೂ ಪಾರ್ಥೀವ್ ಪಟೇಲ್ ಜೊತೆಗೆ ಯುವ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ರಿಷಬ್ ಪಂತ್‌ರನ್ನೂ ಕೂಡ ಪರಿಗಣಿಸೋ ಸಾಧ್ಯತೆ ಇದೆ.