ಬೆಂಗಳೂರು(ಜೂನ್.13): ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಇನ್ನೊಂದೇ ದಿನ ಬಾಕಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆಯಿಂದ(ಜೂನ್.14) ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಭಾರಿ ಅಭ್ಯಾಸ ನಡೆಸಿದೆ. 

ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ, ಅಫ್ಘಾನಿಸ್ತಾನ ತಂಡವನ್ನ ಲಘುವಾಗಿ ಪರಿಗಣಿಸುವಂತಿಲ್ಲ. ಕಾರಣ ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನ ಬಲಿಷ್ಠ ತಂಡಗಳಿಗೆ ಸೆಡ್ಡು ಹೊಡೆದಿದೆ. ಇದು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸುತ್ತಿರುವ ಅಜಿಂಕ್ಯ ರಹಾನೆಗೆ ಎಚ್ಚರಿಕೆಯ ಗಂಟೆ.

 

 

ಅಫ್ಘಾನಿಸ್ತಾನ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಹಾಗೂ ಮುಜೀಬ್ ಯು ರೆಹಮಾನ್ ದಾಳಿಯನ್ನ ಎದುರಿಸೋದು ಭಾರತಕ್ಕೆ ಸವಾಲಿನ ಪ್ರಶ್ನೆ. ಆಫ್ ಸ್ಪಿನ್ ಬೌಲರ್ ಮೊಹಮ್ಮದ್ ನಬಿ ಕೂಡ ವಿಕೆಟ್ ಕಬಳಿಸಬಲ್ಲರು. ಇನ್ನು ರಿಸ್ಟ್ ಸ್ಪಿನ್ನರ್ ಜಹೀರ್ ಖಾನ್ ಈಗಾಗಲೇ 34 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹೀಗಾಗಿ ಅಫ್ಘಾನ್ ಸ್ಪಿನ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ.

 

 

ಮೊಹಮ್ಮದ್ ಶೆಹಝಾದ್, ಸ್ಟಾನಿಕ್‌ಜೈ, ರಹಮತ್ ಶಾ, ಮೊಹಮ್ಮದ್ ನಬಿ, ಜಾವೇದ್ ಅಹಮ್ಮದ್ ಸೇರಿದಂತೆ ಅಫ್ಘಾನಿಸ್ತಾನ ಬ್ಯಾಟಿಂಗ್ ವಿಭಾಗ ಸಮತೋಲನದಲ್ಲಿದೆ ನಿಜ. ಆದರೆ ಹೆಚ್ಚಿನ ಒತ್ತಡ ನಿಭಾಯಿಸುವಲ್ಲಿ ವಿಫಲವಾಗಿದೆ. 

ಅಫ್ಘಾನಿಸ್ತಾನ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಕ್ರಿಕೆಟ್ ಆಡುತ್ತಿದೆ. ಆದರೆ ತಂಡಕ್ಕೆ ಅಂತಾರಾಷ್ಟ್ರೀಯ ಟೆಸ್ಟ್ ಆಡಿದ ಅನುಭವ ಇಲ್ಲ. ಹೀಗಾಗಿ 5 ದಿನಗಳ ಆಟದಲ್ಲಿ ಅನುಭವ, ತಾಳ್ಮೆ ಕೂಡ ಅಷ್ಟೇ ಮುಖ್ಯವಾಗುತ್ತೆ. 

ಶಿಖರ್ ಧವನ್, ಚೇತೇಶ್ವರ್ ಪೂಜಾರ, ನಾಯಕ ಅಜಿಂಕ್ಯ ರಹಾನೆ, ಕೆಎಲ್ ರಾಹುಲ್ ಮುರಳಿ ವಿಜಯ್ ಹಾಗೂ ದಿನೇಶ್ ಕಾರ್ತಿಕ್ ಒಳಗೊಂಡ ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಇದ್ರ ಜೊತೆಗೆ ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ಸೇರಿದ ಬೌಲಿಂಗ್ ವಿಭಾಗ ಕೂಡ ಅಷ್ಟೇ ಪರಿಣಾಮಕಾರಿಯಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ನೆರವು ನೀಡಲಿದೆ. ಹೀಗಾಗಿ ಉಭಯ ತಂಡದ ಸ್ಪಿನ್ನರ್‌ಗಳು ಮಿಂಚಿನ ಪ್ರದರ್ಶನ ನೀಡಲಿದ್ದಾರೆ. ಆದರೆ ಪಂದ್ಯಕ್ಕೆ ಮಳೆ ಭೀತಿ ಕೂಡ ಕಾಡುತ್ತಿದೆ. 

ಭಾರತ : ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರ, ದಿನೇಶ್ ಕಾರ್ತಿಕ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್.

ಅಫ್ಘಾನಿಸ್ತಾನ: ಅಸ್ಗರ್ ಸ್ಟಾನಿಕ್‌ಜೈ, ಅಫ್ಸರ್ ಝಝೈ, ಅಮಿರ್ ಹಮ್ಜಾ, ಹಶ್ಮತುಲ್ಲಾ ಶಾಹಿದಿ, ಇಸಾನುಲ್ಲಾ, ಜಾವೇದ್ ಅಹಮ್ಮದಿ, ಮೊಹಮ್ಮದ್ ನಬಿ, ಮೊಹಮ್ಮದ್ ಶೆಹಝಾದ್, ಮಜೀಬ್ ಯುಆರ್ ರೆಹಮಾನ್, ನಾಸಿರ್ ಜಮಾಲ್, ರಹಮತ್ ಶಾ, ರಶೀದ್ ಖಾನ್, ಸಯ್ಯದ್ ಶಿರ್ಝಾದ್, ವಫಾದರ್, ಯಮೀನ್ ಅಹಮ್ಮದ್ಜೈ ಹಾಗೂ ಜಹೀರ್ ಖಾನ್