ಭಾರತ-ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಆದರೆ ಗೆಲುವಿನ ಬಳಿಕ ರಹಾನೆ ಟೀಂ ತೋರಿದ ನಡೆಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಹಾಗಾದರೆ ಗೆಲುವಿನ ಬಳಿಕ ಭಾರತ ತಂಡ ಮಾಡಿದ್ದೇನು?
ಬೆಂಗಳೂರು(ಜೂ.15): ಅಫ್ಘಾನಿಸ್ತಾನ ವಿರುದ್ಧ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 262 ರನ್‌ಗಳ ಗೆಲುವು ದಾಖಲಿಸಿದೆ. ಆದರೆ ಗೆಲುವಿನ ಬಳಿಕ ಟೀಮ್ಇಂಡಿಯಾ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಟ್ರೋಫಿ ಗೆದ್ದ ಬಳಿಕ ಭಾರತದ ನಾಯಕ ಅಜಿಂಕ್ಯ ರಹಾನೆ, ಫೋಟೋಗೆ ಫೋಸ್ ನೀಡಲು ಆಫ್ಘಾನಿಸ್ತಾನ ತಂಡವನ್ನೂ ಆಹ್ವಾನಿಸಿತು. ಚೊಚ್ಚಲ ಬಾರಿಗೆ ಟೆಸ್ಟ್ ಪಂದ್ಯವಾಡಿದ ಆಫ್ಘಾನಿಸ್ತಾನ ತಂಡ ಭಾರತದ ಜೊತೆ ಚಾಂಪಿಯನ್ ಪಟ್ಟದ ಮುಂದೆ ಫೋಟೋಗೆ ಫೋಸ್ ನೀಡಿ ಸಂಭ್ರಮಿಸಿತು. ಟೀಮ್ಇಂಡಿಯಾದ ಕ್ರೀಡಾ ಸ್ಪೂರ್ತಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಭಾರತಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಟ್ರೋಫಿಯನ್ನ ಅಫ್ಘಾನಿಸ್ತಾನ ಆಟಗಾರರ ಕೈಗೆ ನೀಡಿ ಚಾಂಪಿಯನ್ ಪಟ್ಟದ ಮುಂದೆ ಉಭಯ ತಂಡದ ಆಟಗಾರರು ಫೋಟೋ ಕ್ಲಿಕ್ಕಿಸಿದರು. ಕ್ರಿಕೆಟ್ ಶಿಶು ಅಂತಾನೆ ಬಿಂಬಿತವಾಗಿರುವ ಅಫ್ಘಾನಿಸ್ತಾನ ಚೊಚ್ಚಲ ಟೆಸ್ಟ್ ಪಂದ್ಯ ಆಡಿದೆ. ಭಾರತ ವಿರುದ್ಧ ಟೆಸ್ಟ್ ಮಾದರಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅಫ್ಘಾನ್ ಉತ್ತಮ ಹೋರಾಟ ನೀಡಲು ಸಾಧ್ಯವಾಗಿಲ್ಲ.
ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯ ಕೇವಲ 2 ದಿನಕ್ಕೆ ಮುಕ್ತಾಯಗೊಂಡಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಸಿಡಿಸಿ ಆಲೌಟ್ ಆಗಿತ್ತು. ಆದರೆ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 109 ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 103 ರನ್‌ಗಳಿಗೆ ಆಲೌಟ್ ಆಗೋ ಮೂಲಕ ಸೋಲಿಗೆ ಶರಣಾಯಿತು.
