ಭಾರತ ತಂಡ ಎರಡನೇ ದಿನದಾಟದ ದಿನದಾಟದ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೇ 60 ರನ್ ಕಲೆಹಾಕಿದೆ.

ಚೆನ್ನೈ(ಡಿ.17): ಭಾರತ ತಂಡದ ದಾಳಿಯನ್ನು ತಕ್ಕ ಪ್ರತ್ಯುತ್ತರ ನೀಡಿದ ಇಂಗ್ಲೆಂಡ್ ತಂಡ 477 ರನ್'ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದಕ್ಕೆ ಪ್ರತಿಯಾಗಿ ಭಾರತ ತಂಡ ಎರಡನೇ ದಿನದಾಟದ ದಿನದಾಟದ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೇ 60 ರನ್ ಕಲೆಹಾಕಿದೆ.

ಮೊದಲ ಇನಿಂಗ್ಸ್'ನಲ್ಲಿ ಇಂಗ್ಲೆಂಡ್ ನೀಡಿದ 477ರನ್'ಗಳ ಬೃಹತ್ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಪಾರ್ಥೀವ್ ಪಟೇಲ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಆರಂಭಿಕ ಆಟಗಾರ ಮುರಳಿ ವಿಜಯ್ ಸ್ಥಾನದಲ್ಲಿ ಆಡಲಿಳಿದ ಎಡಗೈ ಆಟಗಾರ ಪಾರ್ಥೀವ್ ಪಟೇಲ್ ನಿರಾಸೆ ಮಾಡಲಿಲ್ಲ. ಪಾರ್ಥೀವ್ 28 ರನ್'ಗಳಿಸಿ ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಇನ್ನು ಕನ್ನಡಿಗ ರಾಹುಲ್ ಕೂಡ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದು 30* ರನ್ ಕಲೆಹಾಕಿದ್ದಾರೆ.

ಮೊದಲ ದಿನ ಭಾರತದ ಬೌಲರ್'ಗಳನ್ನು ಮೊಯಿನ್ ಅಲಿ ಹಾಗೂ ಜೋ ರೂಟ್ ಕಾಡಿದ್ದರೆ, ಎರಡನೇ ದಿನ ಲಿಯಾಮ್ ಡಾಸನ್ ಹಾಗೂ ಆದಿಲ್ ರಶೀದ್ ಭಾರತದ ಪಾಲಿಗೆ ತಲೆನೋವಾಗಿ ಪರಿಣಮಿಸಿದರು. 284-4 ರನ್'ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಒಂದು ಹಂತದಲ್ಲಿ 321 ರನ್'ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಆದರೆ ಎಂಟನೇ ವಿಕೆಟ್'ಗೆ ಜತೆಯಾದ ರಶೀದ್ ಹಾಗೂ ದಾಸನ್ 108ರನ್'ಗಳ ಜೊತೆಯಾಟ ನೀಡಿ ತಂಡಕ್ಕೆ ನೆರವಾದರು.

ಭಾರತದ ಪರ ಜಡೇಜಾ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಇನ್ನು ಸ್ಥಳೀಯ ಪ್ರತಿಭೆ ಅಶ್ವಿನ್ ಹಾಗೂ ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆದರು.