Asianet Suvarna News Asianet Suvarna News

ಪ್ರತಿರೋಧವಿಲ್ಲದೇ ಸೋತ ಭಾರತ; ಚೊಚ್ಚಲ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟ ಪಾಕ್

ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಹೊಸ ಚಾಂಪಿಯನ್ ಸಿಕ್ಕಿದೆ. ಇಂದು ನಡೆದ ಫೈನಲ್'ನಲ್ಲಿ ಭಾರತವನ್ನು 180 ರನ್'ಗಳಿಂದ ಬಗ್ಗುಬಡಿದ ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿಯಿತು. ಪಾಕಿಸ್ತಾನದ 338 ರನ್'ಗಳಿಗೆ ಪ್ರತಿಯಾಗಿ ಟೀಮ್ ಇಂಡಿಯಾ ಕೇವಲ 158 ರನ್'ಗಳಿಗೆ ಆಲೌಟ್ ಆಯಿತು.​

india pakistan champions trophy finals update
  • Facebook
  • Twitter
  • Whatsapp

ಲಂಡನ್(ಜೂನ್ 18): ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಹೊಸ ಚಾಂಪಿಯನ್ ಸಿಕ್ಕಿದೆ. ಇಂದು ನಡೆದ ಫೈನಲ್'ನಲ್ಲಿ ಭಾರತವನ್ನು 180 ರನ್'ಗಳಿಂದ ಬಗ್ಗುಬಡಿದ ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿಯಿತು. ಪಾಕಿಸ್ತಾನದ 338 ರನ್'ಗಳಿಗೆ ಪ್ರತಿಯಾಗಿ ಟೀಮ್ ಇಂಡಿಯಾ ಕೇವಲ 158 ರನ್'ಗಳಿಗೆ ಆಲೌಟ್ ಆಯಿತು.

ಕೆನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಗೆಲ್ಲಲು 339 ರನ್'ಗಳ ಕಠಿಣ ಸವಾಲಿಗೆ ಪ್ರತಿಯಾಗಿ ಭಾರತ ಸ್ವಲ್ಪವೂ ಪ್ರತಿರೋಧ ತೋರದೆ ಶರಣಾಯಿತು. ಹಾರ್ದಿಕ್ ಪಾಂಡ್ಯ ಒಂದಷ್ಟು ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಬಿಟ್ಟರೆ ಉಳಿದಂತೆ ಭಾರತೀಯ ಬ್ಯಾಟುಗಾರರು ಪೇಲವ ಪ್ರದರ್ಶನ ನೀಡಿದರು. 72 ರನ್ನಾಗುವಷ್ಟರಲ್ಲಿ 6 ವಿಕೆಟ್'ಗಳು ಉರುಳಿಬಿದ್ದಾಗಲೇ ಸೋಲು ಖಚಿತವೆನಿಸಿತು. ರೋಹಿತ್ ಶರ್ಮಾ ಸೊನ್ನೆ ಸುತ್ತಿದರು. ವಿರಾಟ್ ಕೊಹ್ಲಿ, ಧೋನಿ, ಕೇದಾರ್ ಜಾಧವ್ ಒಂದಂಕಿ ಮೊತ್ತಕ್ಕೇ ತೃಪ್ತಿಪಟ್ಟರು.

ಪಾಂಡ್ಯ ಪ್ರದರ್ಶನ:
72 ರನ್ನಿಗೆ 6 ವಿಕೆಟ್ ಕಳೆದುಕೊಂಡು ಸೋಲು ನಿಶ್ಚಿತವೆನಿಸಿದ್ದ ಸಂದರ್ಭದಲ್ಲಿ ಜೊತೆಯಾದವರು ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ. ಯಾರೂ ಕೂಡ ಇವರಿಂದ ಪ್ರತಿರೋಧ ಬರಬಹುದು ಎಂದೆಣಿಸಿರಲಿಲ್ಲ. ಆದರೆ, ಪಾಂಡ್ಯ ಸ್ವಲ್ಪಸ್ವಲ್ಪವೇ ಪಾಕ್ ಬೌಲಿಂಗ್ ಮೇಲೆ ಪ್ರಾಬಲ್ಯ ಸಾಧಿಸಲು ಆರಂಭಿಸಿದರು. ಬೌಂಡರಿ ಮತ್ತು ಸಿಕ್ಸರ್'ಗಳ ಸುರಿಮಳೆ ಆಗತೊಡಗುತ್ತಿದ್ದಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಣ್ಣದೊಂದು ಆಸೆ ಮತ್ತೆ ಹುಟ್ಟಿಕೊಂಡಿತು. ಪಾಂಡ್ಯ ಮತ್ತು ಜಡೇಜಾ 7ನೇ ವಿಕೆಟ್'ಗೆ ಕೇವಲ 10 ಓವರ್'ನಲ್ಲಿ 80 ರನ್ ಜೊತೆಯಾಟದಲ್ಲಿ ಭಾಗಿಯಾದಾಗ ಗೆಲುವಿನ ಆಸೆ ಸ್ವಲ್ಪ ಚಿಗುರಿತ್ತು. ಆದರೆ, 27ನೇ ಓವರ್'ನಲ್ಲಿ ದುರದೃಷ್ಟಕರ ರೀತಿಯಲ್ಲಿ ಪಾಂಡ್ಯ ಔಟಾಗಿದ್ದು ಭಾರತದ ಸೋಲು ಖಚಿತವಾಯಿತು. ಪಾಂಡ್ಯ ಕೇವಲ 43 ಬಾಲ್'ನಲ್ಲಿ 76 ರನ್ ಸಿಡಿಸಿದ್ದು ಭಾರತಕ್ಕೆ ಸ್ವಲ್ಪಮಟ್ಟಿಗಾದರೂ ಸಮಾಧಾನ ತಂದಿತು. ಪಾಂಡ್ಯರ ಇನ್ನಿಂಗ್ಸಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿ ಒಳಗೊಂಡಿದ್ದವು.

ಇನ್ನು, ಪಾಕಿಸ್ತಾನದ ಟ್ರಂಪ್ ಕಾರ್ಡ್ಸ್ ಆಗಿರುವ ಬೌಲರ್'ಗಳು ಫೈನಲ್'ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಮೊಹಮ್ಮದ್ ಆಮಿರ್, ಶದಾಬ್ ಖಾನ್, ಹಸನ್ ಅಲಿ ಅವರ ಬೌಲಿಂಗ್'ಗೆ ಟೀಮ್ ಇಂಡಿಯಾ ಬ್ಯಾಟುಗಾರರ ಬಳಿ ಉತ್ತರವಿರಲಿಲ್ಲ. ಮೊಹಮ್ಮದ್ ಅಮಿರ್ ಮತ್ತು ಹಸನ್ ಅಲಿ ತಲಾ 3 ವಿಕೆಟ್ ಪಡೆದರು.

ಇದಕ್ಕೂ ಮುನ್ನ, ಫಕರ್ ಜಮಾನ್ ಅವರ ಅಮೋಘ ಶತಕದ ನೆರವಿನಿಂದ ಪಾಕಿಸ್ತಾನ ಕ್ರಿಕೆಟ್ ತಂಡ 338 ರನ್'ಗಳ ಬೃಹತ್ ಮೊತ್ತ ಪೇರಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಅದ್ಭುತ ಆರಂಭ ಪಡೆಯಿತು. ಅಜರ್ ಅಲಿ ಮತ್ತು ಫಕರ್ ಜಮಾನ್ ಮೊದಲ ವಿಕೆಟ್'ಗೆ ಕೇವಲ 23 ಓವರ್'ನಲ್ಲಿ 128 ರನ್ ಸೇರಿಸಿದರು. ಅಜರ್ ಅಲಿ 59 ರನ್ ನಿರ್ಗಮಿಸಿದ ಬಳಿಕ ಫಕರ್ ಜಮಾನ್ ಅವರಿಗೆ ಬಾಬರ್ ಅಜಮ್ ಒಳ್ಳೆಯ ಜೊತೆಗಾರನಾದರು. ಇವರಿಬ್ಬರು 2ನೇ ವಿಕೆಟ್'ಗೆ 72 ರನ್ ಸೇರಿಸಿದರು. ಬಾಬರ್ 46 ರನ್ ಗಳಿಸಿದರು. ಬಳಿಕ ಶೋಯಬ್ ಮಲಿಕ್ ಹೆಚ್ಚು ರನ್ ಗಳಿಸಿದೆ ಬೇಗನೇ ನಿರ್ಗಮಿಸಿದರು. ಈ ವೇಳೆ ಶತಕ ಪೂರೈಸಿದ ಫಕರ್ ಜಮಾನ್ ತಂಡದ ಸ್ಕೋರು 267 ಆಗಿದ್ದಾಗ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.

ಬಳಿಕ, ಮೊಹಮ್ಮದ್ ಹಫೀಜ್ ಮತ್ತು ಇಮದ್ ವಾಸೀಂ ಇಬ್ಬರೂ ಒಳ್ಳೆಯ ಫಿನಿಶಿಂಗ್ ಕೊಟ್ಟರು. ಇಬ್ಬರೂ 5ನೇ ವಿಕೆಟ್'ಗೆ 71 ರನ್'ಗಳ ಮುರಿಯದ ಜೊತೆಯಾಟ ಆಡಿ ತಂಡದ ಸ್ಕೋರು 338 ರನ್ ತಲುಪಲು ಕಾರಣವಾದರು. ಹಫೀಜ್ ಭರ್ಜರಿ ಅರ್ಧಶತಕ ಗಳಿಸಿದರು.

ಇದು ಭಾರತದ ವಿರುದ್ಧ ಪಾಕಿಸ್ತಾನ ಗಳಿಸಿದ ಫಸ್ಟ್ ಬ್ಯಾಟಿಂಗ್'ನ ಅತ್ಯಧಿಕ ಸ್ಕೋರಾಗಿದೆ. ಈ ಮೊದಲು 2004 ಮತ್ತು 2012ರಲ್ಲಿ 329 ರನ್ ಗಳಿಸಿದ್ದು ದಾಖಲೆಯಾಗಿತ್ತು. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನಕ್ಕೆ ಇದು ಚೊಚ್ಚಲ ಪ್ರಶಸ್ತಿಯಾಗಿದೆ. ಟ್ರೋಫಿಯ ಮೊದಲ ಲೀಗ್ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಪಾಕಿಸ್ತಾನ ಸೇಡು ತೀರಿಸಿಕೊಂಡಂತಾಗಿದೆ.

ಸ್ಕೋರು ವಿವರ:

ಪಾಕಿಸ್ತಾನ 50 ಓವರ್ 338/4
(ಫಕರ್ ಜಮಾನ್ 114, ಅಜರ್ ಅಲಿ 59, ಬಾಬರ್ ಅಜಮ್ 46, ಮೊಹಮ್ಮದ್ ಹಫೀಜ್ ಅಜೇಯ 57, ಇಮದ್ ವಾಸೀಂ ಅಜೇಯ 25 ರನ್)

ಭಾರತ 30.3 ಓವರ್ 158 ರನ್ ಆಲೌಟ್
(ಹಾರ್ದಿಕ್ ಪಾಂಡ್ಯ 76, ಯುವರಾಜ್ ಸಿಂಗ್ 22, ಶಿಖರ್ ಧವನ್ 21 ರನ್, ರವೀಂದ್ರ ಜಡೇಜಾ 15 ರನ್ - ಮೊಹಮ್ಮದ್ ಆಮೀರ್ 16/3, ಹಸನ್ ಅಲಿ 19/3, ಶದಾಬ್ ಖಾನ್ 60/2)

Follow Us:
Download App:
  • android
  • ios