ಇಂದಿನಿಂದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭಗೊಳ್ಳುತ್ತಿದೆ. ಅನಾರೋಗ್ಯದ ಹಿನ್ನಲೆಯಲ್ಲಿ ಸೈನಾ ನೆಹ್ವಾಲ್ ಅಲಭ್ಯರಾಗಿರೋದು ಪಿವಿ ಸಿಂಧುಗೆ ನೆರವಾಗಲಿದೆ. ಇಲ್ಲಿದೆ ಇಂಡಿಯಾ ಓಪನ್ ಟೂರ್ನಿಯ ಹೆಚ್ಚಿನ ವಿವರ.
ನವದೆಹಲಿ(ಮಾ.26): ಮಾಜಿ ಚಾಂಪಿಯನ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ಅನಾರೋಗ್ಯದ ಕಾರಣ ಟೂರ್ನಿಗೆ ಗೈರಾಗಲಿದ್ದಾರೆ.
ಇದನ್ನೂ ಓದಿ: ತೇಜಸ್ ಯುದ್ಧವಿಮಾನದಲ್ಲಿ ಹಾರಾಡಿದ ಬ್ಯಾಡ್ಮಿಂಟನ್ ತಾರೆ ಸಿಂಧು!
ಚೀನಾದ ಅಗ್ರ ಆಟಗಾರ್ತಿ ಚೆನ್ ಯೂಫಿ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದರಿಂದ ಸಿಂಧುಗೆ ಅಗ್ರ ಶ್ರೇಯಾಂಕ ದೊರೆತಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಜಪಾನ್‌ನ ತಾರಾ ಆಟಗಾರ್ತಿಯರು ಸಹ ಟೂರ್ನಿಯಲ್ಲಿ ಆಡುತ್ತಿಲ್ಲವಾದ್ದರಿಂದ ಸಿಂಧುಗೆ ಗೆಲುವು ಸುಲಭವಾಗಲಿದೆ.
ಇಂಡೋನೇಷ್ಯಾ ಮಾಸ್ಟರ್ಸ್ನಲ್ಲಿ ಕ್ವಾರ್ಟರ್ ಪ್ರವೇಶಿಸಿದ್ದ ಸಿಂಧು, ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಹೀಗಾಗಿ 2019ರಲ್ಲಿ ಮೊದಲ ಪ್ರಶಸ್ತಿ ಗೆಲ್ಲಲು ಸಿಂಧು ಎದುರು ನೋಡುತ್ತಿದ್ದಾರೆ. ಇದೇ ವೇಳೆ ಶ್ರೀಕಾಂತ್ 2017ರ ಬಳಿಕ ಪಂದೂ ಪ್ರಶಸ್ತಿ ಜಯಿಸಿಲ್ಲ. ಇಂಡಿಯಾ ಓಪನ್‌ನಲ್ಲಿ ಗೆಲ್ಲುವ ಮೂಲಕ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಕಾತರಿಸುತ್ತಿದ್ದಾರೆ.