ಭಾರತ ಈ ಪಂದ್ಯ ಸೋತರೂ ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ. ಜ. 26ರಿಂದ ಫೆ.1ರವರೆಗೆ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ.

ಕೋಲ್ಕತಾ(ಜ. 22): ಕೇದಾರ್ ಜಾಧವ್ ಇನ್ನೇನು ಭಾರತಕ್ಕೆ ಪಂದ್ಯ ಗೆಲ್ಲಿಸಿಕೊಡುತ್ತಾರೆಂದು ಕಾತರದಿಂದ ಕಾದಿದ್ದವರೆಗೆ ಕೊನೆಯ ಗಳಿಗೆಯಲ್ಲಿ ನಿರಾಶೆಯಾಯಿತು. ಕೊನೆಯ ಓವರ್'ನಲ್ಲಿ ಗೆಲ್ಲಲು 16 ರನ್ ಬೇಕಿದ್ದಾಗ ಮೊದಲೆರಡು ಬಾಲನ್ನು ಸಿಕ್ಸರ್ ಮತ್ತು ಬೌಂಡರಿಗಟ್ಟಿದ ಕೇದಾರ್ ಜಾಧವ್ ಭಾರತಕ್ಕೆ ರೋಚಕ ಜಯದ ವಿಶ್ವಾಸ ಮೂಡಿಸಿದ್ದರು. ಮತ್ತೆರಡು ಬಾಲ್ ವೇಸ್ಟ್ ಮಾಡಿದರೂ ಭಾರತೀಯರಿಗೆ ನಿರಾಶೆಯಾಗಲಿಲ್ಲ. ಆದರೆ, ಐದನೇ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಯತ್ನಿಸಿ ಕೇದಾರ್ ಜಾಧವ್ ಔಟಾದಾಗ ಇಡೀ ಕೋಲ್ಕತಾ ಸ್ಟೇಡಿಯಂ ಸ್ತಬ್ದವಾಯಿತು. ಕೇದಾರ್ ಔಟಾದರೂ ಎಂಎಸ್ ಧೋನಿ, ವಿರಾಟ್ ಕೊಹ್ಲಿ ನಂತರ ಭಾರತಕ್ಕೆ ಮೂರನೇ ಫಿನಿಶರ್ ಬಂದಿರುವ ಕುರುಹು ನೀಡಿದರು.

ಈ ಪಂದ್ಯದಲ್ಲಿ ಗೆಲ್ಲಲು 322 ರನ್ ಗುರಿ ಪಡೆದ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿ 5 ರನ್'ಗಳಿಂದ ಸೋಲನುಭವಿಸಿತು. ಧೋನಿ, ಕೊಹ್ಲಿ, ಯುವಿ ಅವರೆಲ್ಲಾ ಪೆವಿಲಿಯನ್'ಗೆ ನಿರ್ಗಮಿಸಿದ ಸಂಕಷ್ಟದ ಸಂದರ್ಭದಲ್ಲಿ ಕೇದಾರ್ ಜಾಧವ್ ಮತ್ತು ಹಾರ್ದಿಕ್ ಪಾಂಡ್ಯ 6ನೇ ವಿಕೆಟ್'ಗೆ 104 ರನ್ ಜೊತೆಯಾಟ ಸೇರಿಸಿದ್ದು ಭಾರತದ ಇನಿಂಗ್ಸ್'ನ ಹೈಲೈಟ್ ಆಗಿದೆ. ಕೇದಾರ್ 90 ರನ್ ಸೇರಿಸಿ ಶಹಬ್ಬಾಸ್ ಎನಿಸಿದರು. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅರ್ಧಶತಕ ಭಾರಿಸಿದರು. ಯುವರಾಜ್ ಸಿಂಗ್ ಕೂಡ ಉಪಯುಕ್ತ ರನ್ ಸೇರಿಸಿದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ಜೇಸನ್ ರಾಯ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಮೊದಲ ವಿಕೆಟ್'ಗೆ 98 ರನ್ ಸೇರಿಸಿದರು. ಉತ್ತಮ ಆರಂಭದ ಲಾಭ ಪಡೆದ ಇಂಗ್ಲೆಂಡ್ ಬಹಳ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿತು. ಬೇರ್'ಸ್ಟೋ, ಇಯಾನ್ ಮಾರ್ಗಾನ್, ಬೆನ್ ಸ್ಟೋಕ್ಸ್ ಮತ್ತು ಕ್ರಿಸ್ ವೋಕ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಸ್ಕೋರನ್ನು 321 ರನ್'ಗೆ ಉಬ್ಬಿಸಿದರು. ಆದರೆ, ಒಂದು ಹಂತದಲ್ಲಿ 350 ರನ್ ಗಡಿ ದಾಟುವ ಕುರುಹು ತೋರಿದ್ದ ಇಂಗ್ಲೆಂಡ್ ಬ್ಯಾಟುಗಾರರಿಗೆ ಕೊನೆಯಲ್ಲಿ ಭಾರತೀಯ ಬೌಲರ್'ಗಳು ಸ್ವಲ್ಪ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ಕೋಲ್ಕತಾದ ದಾಖಲೆ:
ಈ ಪಂದ್ಯಕ್ಕೆ ಮುನ್ನ ಈಡನ್'ಗಾರ್ಡನ್ಸ್'ನಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳೇ ಗೆಲುವು ಸಾಧಿಸಿದ್ದವು. ಈಗ ಆ ದಾಖಲೆ ಮುಂದುವರಿದಿದೆ. ಒಂದೇ ವ್ಯತ್ಯಾಸವೆಂದರೆ ಆ ನಾಲ್ಕು ಪಂದ್ಯಗಳಲ್ಲಿ ಭಾರೀ ಅಂತರದ ಗೆಲುವು ಸಿಕ್ಕಿದ್ದರೆ, ಈ ಪಂದ್ಯದಲ್ಲಿ 5 ರನ್ ಅಂತರದ ಗೆಲುವು ಬಂದಿದೆ.

ಬೆನ್ ಸ್ಟೋಕ್ಸ್ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರೆ, ಕೇದಾರ್ ಜಾಧವ್ ಸರಣಿಶ್ರೇಷ್ಠ ಗೌರವಕ್ಕೆ ಬಾಜನರಾದರು. ಕೇದಾರ್ ಜಾಧವ್ ಮೊದಲ ಪಂದ್ಯದಲ್ಲೂ ಆಕರ್ಷಕ ಶತಕ ಗಳಿಸಿದ್ದರು.

ಭಾರತ ಈ ಪಂದ್ಯ ಸೋತರೂ ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ. ಜ. 26ರಿಂದ ಫೆ.1ರವರೆಗೆ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ.

ಸ್ಕೋರು ವಿವರ:

ಇಂಗ್ಲೆಂಡ್ 50 ಓವರ್ 321/8
(ಜೇಸಾನ್ ರಾಯ್ 65, ಬೆನ್ ಸ್ಟೋಕ್ಸ್ ಅಜೇಯ 57, ಜಾನಿ ಬೇರ್'ಸ್ಟೋ 56, ಇಯಾನ್ ಮಾರ್ಗಾನ್ 43, ಸ್ಯಾಮ್ ಬಿಲ್ಲಿಂಗ್ಸ್ 35, ಕ್ರಿಸ್ ವೋಕ್ಸ್ 34 ರನ್ - ಹಾರ್ದಿಕ್ ಪಾಂಡ್ಯ 49/3, ರವೀಂದ್ರ ಜಡೇಜಾ 62/2)

ಭಾರತ 50 ಓವರ್ 316/9
(ಕೇದಾರ್ ಜಾಧವ್ 90, ಹಾರ್ದಿಕ್ ಪಾಂಡ್ಯ 56, ವಿರಾಟ್ ಕೊಹ್ಲಿ 55, ಯುವರಾಜ್ ಸಿಂಗ್ 45, ಎಂಎಸ್ ಧೋನಿ 25 ರನ್ - ಬೆನ್ ಸ್ಟೋಕ್ಸ್ 63/3, ಜೇಕ್ ಬಾಲ್ 56/2, ಕ್ರಿಸ್ ವೋಕ್ಸ್ 75/2)