ನಾಟಿಂಗ್‌ಹ್ಯಾಮ್‌ನಲ್ಲಿ ಕುಲ್ದೀಪ್‌ ಯಾದವ್‌ ಸ್ಪಿನ್‌ ಜಾದೂಗೆ ಪೆವಿಲಿಯನ್‌ ಪರೇಡ್‌ ನಡೆಸಿದ್ದ ಇಂಗ್ಲೆಂಡ್‌, ಲಂಡನ್‌ ಪಂದ್ಯಕ್ಕೂ ಮುನ್ನ ವಿಮರ್ಶೆ ನಡೆಸಲು ಸಹ ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಫಿಫಾ ವಿಶ್ವಕಪ್‌ ಫೈನಲ್‌ ಭಾನುವಾರ ನಡೆಯಲಿರುವುದರಿಂದ ಒಂದು ದಿನ ಮುಂಚಿತವಾಗಿಯೇ ಅಂದರೆ ಶನಿವಾರವೇ 2ನೇ ಏಕದಿನ ಪಂದ್ಯವನ್ನು ನಡೆಸಲು ನಿರ್ಧರಿಸಲಾಗಿತ್ತು. ಒಂದು ಕಡೆ ಇಂಗ್ಲೆಂಡ್‌ ಫುಟ್ಬಾಲ್‌ ತಂಡ ಫೈನಲ್‌ಗೇರಲಿಲ್ಲ, ಮತ್ತೊಂದೆಡೆ ಇಂಗ್ಲೆಂಡ್‌ ಕ್ರಿಕೆಟ್‌ ತಂಡ ಭಾರತದ ಸ್ಪಿನ್‌ಗೆ ಪರದಾಡುತ್ತಿದೆ.

ಲಂಡನ್‌[ಜು.14]: ಇಂಗ್ಲೆಂಡ್‌ ನೆಲದಲ್ಲಿ ಭಾರತ ಮತ್ತೊಂದು ಸರಣಿ ಗೆಲುವಿನ ಸಂಭ್ರಮ ಆಚರಿಸಲು ಕಾಯುತ್ತಿದೆ. ಕಳೆದ ವಾರವಷ್ಟೇ ಟಿ20 ಸರಣಿ ಗೆದ್ದು ಬೀಗಿದ್ದ ವಿರಾಟ್‌ ಕೊಹ್ಲಿ ಪಡೆ, ಇದೀಗ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳಲು ತುಡಿಯುತ್ತಿದೆ. ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದ ಭಾರತ, ಇಂದು ಇಲ್ಲಿನ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲೂ ಸಾಂಘಿಕ ಪ್ರದರ್ಶನದಿಂದ ಆತಿಥೇಯರನ್ನು ಮಟ್ಟಹಾಕಲು ಲೆಕ್ಕಾಚಾರ ಹಾಕಿದೆ. 

ನಾಟಿಂಗ್‌ಹ್ಯಾಮ್‌ನಲ್ಲಿ ಕುಲ್ದೀಪ್‌ ಯಾದವ್‌ ಸ್ಪಿನ್‌ ಜಾದೂಗೆ ಪೆವಿಲಿಯನ್‌ ಪರೇಡ್‌ ನಡೆಸಿದ್ದ ಇಂಗ್ಲೆಂಡ್‌, ಲಂಡನ್‌ ಪಂದ್ಯಕ್ಕೂ ಮುನ್ನ ವಿಮರ್ಶೆ ನಡೆಸಲು ಸಹ ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಫಿಫಾ ವಿಶ್ವಕಪ್‌ ಫೈನಲ್‌ ಭಾನುವಾರ ನಡೆಯಲಿರುವುದರಿಂದ ಒಂದು ದಿನ ಮುಂಚಿತವಾಗಿಯೇ ಅಂದರೆ ಶನಿವಾರವೇ 2ನೇ ಏಕದಿನ ಪಂದ್ಯವನ್ನು ನಡೆಸಲು ನಿರ್ಧರಿಸಲಾಗಿತ್ತು. ಒಂದು ಕಡೆ ಇಂಗ್ಲೆಂಡ್‌ ಫುಟ್ಬಾಲ್‌ ತಂಡ ಫೈನಲ್‌ಗೇರಲಿಲ್ಲ, ಮತ್ತೊಂದೆಡೆ ಇಂಗ್ಲೆಂಡ್‌ ಕ್ರಿಕೆಟ್‌ ತಂಡ ಭಾರತದ ಸ್ಪಿನ್‌ಗೆ ಪರದಾಡುತ್ತಿದೆ. ಇಂಗ್ಲೆಂಡ್‌ ಅಭಿಮಾನಿಗಳು ಒಂದೇ ದಿನ ತಮ್ಮ ನೆಚ್ಚಿನ ಎರಡೂ ತಂಡಗಳು ನೆಲಕ್ಕುರುಳುವುದನ್ನು ಕಂಡರೆ ಅಚ್ಚರಿಯಿಲ್ಲ.

ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 70 ರನ್‌ ಗಳಿಸಿದ್ದ ಇಂಗ್ಲೆಂಡ್‌ ಕುಲ್ದೀಪ್‌ ದಾಳಿಗಿಳಿಯುತ್ತಲೇ ದಿಢೀರ್‌ ಕುಸಿಯಿತು. ಒಂದು ಲೆಕ್ಕಾಚಾರದ ಪ್ರಕಾರ, ಇಂಗ್ಲೆಂಡ್‌ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆ ಮಾಡಲಿದ್ದು, ಜೋಸ್‌ ಬಟ್ಲರ್‌ ಆರಂಭಿಕನಾಗಿ ಆಡುವ ಸಾಧ್ಯತೆ ಇದೆ.

ಮತ್ತೊಂದೆಡೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ, ತಂಡದಲ್ಲಿ ಯಾವುದೇ ಬದಲಾವಣೆ ಮಾಡುವಂತೆ ಕಾಣುತ್ತಿಲ್ಲ. ಮೊದಲ ಪಂದ್ಯಕ್ಕೂ ಮುನ್ನ ಭುವನೇಶ್ವರ್‌ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಿದ್ದರೂ, ಆತುರದಲ್ಲಿ ಅವರನ್ನು ಆಡಿಸುವ ನಿರ್ಧಾರವನ್ನು ಭಾರತ ತಂಡದ ಆಡಳಿತ ಕೈಗೊಳ್ಳಲಿಲ್ಲ. ಸಿದ್ಧಾರ್ಥ್ ಕೌಲ್‌ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರಿದ್ದು, ಅವರನ್ನೇ ಮುಂದುವರಿಸಬಹುದು. ಇಲ್ಲವೇ ಭುವನೇಶ್ವರ್‌ ತಂಡಕ್ಕೆ ವಾಪಸಾದರೂ ಅಚ್ಚರಿಯಿಲ್ಲ.

ಸಂಭವನೀಯ ತಂಡಗಳು

ಭಾರತ: ರೋಹಿತ್‌, ಧವನ್‌, ಕೊಹ್ಲಿ (ನಾಯಕ), ರಾಹುಲ್‌, ಧೋನಿ, ರೈನಾ, ಹಾರ್ದಿಕ್‌, ಕುಲ್ದೀಪ್‌, ಸಿದ್ಧಾರ್ಥ್, ಉಮೇಶ್‌, ಚಾಹಲ್‌.

ಇಂಗ್ಲೆಂಡ್‌: ರಾಯ್‌, ಬೇರ್‌ಸ್ಟೋ, ರೂಟ್‌, ಬಟ್ಲರ್‌, ಮೊರ್ಗನ್‌ (ನಾಯಕ), ಸ್ಟೋಕ್ಸ್‌, ಅಲಿ, ವಿಲ್ಲಿ, ಪ್ಲಂಕೆಟ್‌, ವುಡ್‌, ರಶೀದ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸೋನಿ ಸಿಕ್ಸ್‌

ಭಾರತಕ್ಕೆ ಸತತ 10ನೇ ಸರಣಿ ಜಯದ ಗುರಿ

2016ರಲ್ಲಿ ಆಸ್ಪ್ರೇಲಿಯಾದಲ್ಲಿ ಸರಣಿ ಗೆದ್ದ ಬಳಿಕ ಭಾರತ ಸತತ 9 ದ್ವಿಪಕ್ಷೀಯ ಏಕದಿನ ಸರಣಿಗಳನ್ನು ವಶಪಡಿಸಿಕೊಂಡಿದೆ. ಇದರ ಮಧ್ಯೆ 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಸೋತಿದ್ದೊಂದೇ ತಂಡಕ್ಕೆ ಎದುರಾದ ನಿರಾಸೆ. ಇಂಗ್ಲೆಂಡ್‌ ವಿರುದ್ಧ ಶನಿವಾರ 2ನೇ ಪಂದ್ಯವನ್ನು ಗೆದ್ದು ಸತತ 10ನೇ ದ್ವಿಪಕ್ಷೀಯ ಸರಣಿ ಜಯದ ಸಂಭ್ರಮವನ್ನು ಆಚರಿಸಲು ಕೊಹ್ಲಿ ಪಡೆ ಕಾಯುತ್ತಿದೆ. ಇದರ ಜತೆಗೆ ಐಸಿಸಿ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರುವ ಸಾಧ್ಯತೆ ಸಹ ಹೆಚ್ಚಲಿದೆ.