ನವದೆಹಲಿ(ಮಾ.07): ಉಗ್ರವಾದ ಬೆಂಬಲಿಸುವ ಪಾಕಿಸ್ತಾನದ ನಡೆಯನ್ನು ಖಂಡಿಸಿ, ಶೂಟಿಂಗ್‌ ವಿಶ್ವಕಪ್‌ಗೆ ಪಾಕಿಸ್ತಾನಿ ಶೂಟರ್‌ಗಳಿಗೆ ವೀಸಾ ನೀಡದೆ ಇದ್ದಿದ್ದಕ್ಕೆ ಭಾರತದ ಮೇಲೆ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ(ಐಒಸಿ) ಸಿಟ್ಟಾಗಿದ್ದು, ಅದರ ಪರಿಣಾಮವಾಗಿ ಜಾಗತಿಕ ಮಟ್ಟದ ಕ್ರೀಡಾಕೂಟಗಳ ಆತಿಥ್ಯವನ್ನು ಭಾರತದಿಂದ ಹಿಂಪಡೆಯಲು ನಿರ್ಧರಿಸಿದೆ. ಈ ನಿರ್ಧಾರದಿಂದಾಗಿ ಭಾರತ ಈಗಾಗಲೇ ಪಡೆದಿರುವ ಹಲವು ಅಂತಾರಾಷ್ಟ್ರೀಯ ಕೂಟಗಳ ಆತಿಥ್ಯ ಹಕ್ಕನ್ನು ಕಳೆದುಕೊಳ್ಳುವ ಭೀತಿಗೆ ಸಿಲುಕಿದೆ.

ಮುಂಬರುವ ತಿಂಗಳುಗಳಲ್ಲಿ ಭಾರತ ದೊಡ್ಡ ಟೂರ್ನಿಗಳಿಗೆ ಆತಿಥ್ಯ ವಹಿಸಬೇಕಿದೆ. ಆದರೆ ಪಾಲ್ಗೊಳ್ಳುವ ಎಲ್ಲಾ ರಾಷ್ಟ್ರಗಳ ಕ್ರೀಡಾಪಟುಗಳಿಗೆ ವೀಸಾ ನೀಡುತ್ತೇವೆ ಎಂದು ಭಾರತ ಸರ್ಕಾರ ಐಒಸಿಗೆ ಲಿಖಿತ ಭರವಸೆ ನೀಡುತ್ತಿಲ್ಲ. ಹೀಗಾಗಿ ಕ್ರೀಡಾಕೂಟಗಳ ಆತಿಥ್ಯ ಭಾರತದ ಕೈತಪ್ಪುವ ಆತಂಕ ಶುರುವಾಗಿದೆ.

1972ರ ಒಲಿಂಪಿಕ್ಸ್‌ ಮೇಲೆಯೇ ಭಯೋತ್ಪಾದನೆಯ ಕರಿನೆರಳು ಬಿದ್ದಿದ್ದರೂ, ಐಒಸಿ ಮಾತ್ರ ಉಗ್ರವಾದಕ್ಕೆ ಬೆಂಬಲಿಸುವ, ಭಯೋತ್ಪಾದಕರಿಗೆ ಆಶ್ರಯ ನೀಡುವ ರಾಷ್ಟ್ರದ ಪರ ನಿಂತಿದೆ. ಪಾಕಿಸ್ತಾನವನ್ನು ಬಹಿಷ್ಕರಿಸಿ, ತಕ್ಕ ಸಂದೇಶ ರವಾನಿಸಲು ಹೊರಟಿರುವ ಭಾರತದ ವಿರುದ್ಧ ನಿಂತಿರುವ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ತಪ್ಪು ಉದಾಹರಣೆ ಹುಟ್ಟುಹಾಕುತ್ತಿದೆ.

ಪಾಕಿಸ್ತಾನಿಯರಿಗೆ ವಿಸಾ ನಿರಾಕರಣೆ - ಬೆಂಗಳೂರು ಸ್ನೂಕರ್ ಟೂರ್ನಿ ಮುಂದೂಡಿಕೆ!

ಮೊದಲೆನೆಯದಾಗಿ ಯುನೈಟೆಡ್‌ ವರ್ಲ್ಡ್ ರೆಸ್ಲಿಂಗ್‌ (ವಿಶ್ವ ಕುಸ್ತಿ ಸಂಸ್ಥೆ) ಇದೇ ವರ್ಷ ಜುಲೈನಲ್ಲಿ ಭಾರತದಲ್ಲಿ ನಡೆಯಬೇಕಿರುವ ಏಷ್ಯಾ ಕಿರಿಯರ ಚಾಂಪಿಯನ್‌ಶಿಪ್‌ ಅನ್ನು ಸ್ಥಳಾಂತರಗೊಳಿಸುವ ಸುಳಿವು ನೀಡಿದೆ. ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಭಾರತೀಯ ಕುಸ್ತಿ ಫೆಡರೇಷನ್‌ ಜತೆ ಸಂಪರ್ಕ ಕಡಿತಗೊಳಿಸುವಂತೆ ಸೂಚಿಸಿದ್ದು, ಯಾವುದೇ ಟೂರ್ನಿಯ ಆತಿಥ್ಯ ನೀಡದಂತೆ ಆಗ್ರಹಿಸಿದೆ.

ಇದೇ ರೀತಿ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ (ಎಫ್‌ಐಎಚ್‌) ಸಹ ಒಲಿಂಪಿಕ್‌ ಅರ್ಹತಾ ಟೂರ್ನಿಯಾಗಿರುವ ಹಾಕಿ ಸೀರೀಸ್‌ ಫೈನಲ್ಸ್‌ ಪಂದ್ಯಾವಳಿಯನ್ನು ಭಾರತದಿಂದ ಎತ್ತಂಗಡಿ ಮಾಡಲು ಚಿಂತನೆ ನಡೆಸಿದೆ. ಒಡಿಶಾದ ಭುವನೇಶ್ವರದಲ್ಲಿ ಇದೇ ಜೂನ್‌ ತಿಂಗಳಲ್ಲಿ ಟೂರ್ನಿ ನಡೆಯಬೇಕಿದೆ. ಎಫ್‌ಐಎಚ್‌ ಅಧಿಕಾರಿಗಳು ಸ್ವಿಜರ್‌ಲೆಂಡ್‌ನ ಲುಸ್ನಾನೆಯಲ್ಲಿ ಐಒಸಿ ಕೇಂದ್ರ ಕಚೇರಿಗೆ ತೆರಳಿ ಭಾರತದಿಂದ ಆತಿಥ್ಯ ಹಕ್ಕನ್ನು ಕಸಿದುಕೊಳ್ಳಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಎಫ್‌ಐಎಚ್‌ ಅಧ್ಯಕ್ಷ ನರೇಂದ್ರ ಬಾತ್ರಾ ಅವರೇ ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಅಧ್ಯಕ್ಷ ಸಹ ಆಗಿರುವ ಕಾರಣ, ಹೇಗಾದರೂ ಮಾಡಿ ಟೂರ್ನಿಯನ್ನು ಭಾರತದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ ಆದರೂ, ಅದು ಅಷ್ಟು ಸುಲಭವಿಲ್ಲ ಎನ್ನಲಾಗಿದೆ.

ಭಾರತ ಟೇಬಲ್‌ ಟೆನಿಸ್‌ ಫೆಡರೇಷನ್‌ (ಟಿಟಿಎಫ್‌ಐ) ಸಹ ಒಡಿಶಾದಲ್ಲಿ ಜು.17ರಿಂದ 22ರ ವರೆಗೂ ಕಾಮನ್‌ವೆಲ್ತ್‌ ಚಾಂಪಿಯನ್ಸ್‌ಶಿಪ್‌ ಅಯೋಜಿಸಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ಟೂರ್ನಿಯಲ್ಲಿ ಪಾಕಿಸ್ತಾನಿ ಆಟಗಾರರು ಸಹ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಟೂರ್ನಿಯ ಆತಿಥ್ಯ ಕೈತಪ್ಪುವ ಸಾಧ್ಯತೆ ಇದೆ.

ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ಭಾರತದಲ್ಲಿ ಸಂಯೋಜಿತ ಶೂಟಿಂಗ್‌ ವಿಶ್ವಕಪ್‌ (ರೈಫಲ್‌/ಪಿಸ್ತೂಲ್‌/ಶಾಟ್‌ಗನ್‌) ನಡೆಯಬೇಕಿದೆ. ಈಗಾಗಲೇ ಟೂರ್ನಿಯ ಆತಿಥ್ಯ ಭಾರತಕ್ಕೆ ಸಿಕ್ಕಿದೆ. ಈಗಾಗಲೇ ಅಂತಾರಾಷ್ಟ್ರೀಯ ಸ್ಪೋರ್ಟ್‌ ಶೂಟಿಂಗ್‌ ಫೆಡರೇಷನ್‌ (ಐಎಸ್‌ಎಸ್‌ಎಫ್‌), ವೀಸಾ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆತಿಥ್ಯ ಹಕ್ಕು ಹಿಂಪಡೆಯುವುದಾಗಿ ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ)ಗೆ ಮಾಹಿತಿ ರವಾನಿಸಿದೆ ಎನ್ನಲಾಗಿದೆ.

ಲಿಖಿತ ಭರವಸೆ ಇಲ್ಲ?: ಎಷ್ಟೇ ಒತ್ತಡ ಬಿದ್ದರೂ ಕೇಂದ್ರ ಸರ್ಕಾರ, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಗೆ ಲಿಖಿತ ಭರವಸೆ ನೀಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಕೊನೆ ಪಕ್ಷ ಲೋಕಸಭಾ ಚುನಾವಣೆವರೆಗಂತೂ ಇಂತಹ ಬೆಳವಣೆಗೆ ಸಾಧ್ಯವಿಲ್ಲ ಎನ್ನಲಾಗಿದೆ. ‘ಲೋಕಸಭಾ ಚುನಾವಣೆ ಬಳಿಕ ಲಿಖಿತ ಭರವಸೆ ವಿಚಾರದ ಬಗ್ಗೆ ಗಮನ ಹರಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಅಂತಹ ವಾತಾವರಣವಿಲ್ಲ’ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ದೊಡ್ಡ ಕೂಟಗಳ ಮೇಲೆ ಕಣ್ಣು!: ಭವಿಷ್ಯದಲ್ಲಿ ಭಾರತ ಜಾಗತಿಕ ಮಟ್ಟದ ಕ್ರೀಡಾಕೂಟಗಳ ಆತಿಥ್ಯದ ಮೇಲೆ ಕಣ್ಣಿಟ್ಟಿದ್ದು, ಆ ಕೂಟಗಳ ಆತಿಥ್ಯವೂ ಕೈತಪ್ಪುವ ವಾತಾವರಣ ಸೃಷ್ಟಿಯಾಗಿದೆ. ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) 2020ರ ಏಪ್ರಿಲ್‌ನಲ್ಲಿ ಏಷ್ಯಾ ಓಷಿಯಾನಿಯಾ ಒಲಿಂಪಿಕ್‌ ಕ್ವಾಲಿಫೈಯರ್‌ ಟೂರ್ನಿಗೆ ಬಿಡ್‌ ಸಲ್ಲಿಸಲು ನಿರ್ಧರಿಸಿದೆ. ಆದರೆ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಫೆಡರೇಷನ್‌ ಈಗಾಗಲೇ 2021ರ ವಿಶ್ವ ಚಾಂಪಿಯನ್‌ಶಿಪ್‌ ಆತಿಥ್ಯವನ್ನು ಹಿಂಪಡೆಯುವ ಎಚ್ಚರಿಕೆ ರವಾನಿಸಿದ್ದು, ಬಿಡ್‌ ಸಲ್ಲಿಕೆ ಬಗ್ಗೆ ಬಿಎಫ್‌ಐನಲ್ಲಿ ಗೊಂದಲ ಶುರುವಾಗಿದೆ. ಅದೇ ರೀತಿ 2020ರ ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ಗೆ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಸಲ್ಲಿಸಿರುವ ಬಿಡ್‌ ಸಹ ತಿರಸ್ಕಾರಗೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ 2026ರ ಕಿರಿಯರ ಒಲಿಂಪಿಕ್ಸ್‌, 2030ರ ಏಷ್ಯನ್‌ ಗೇಮ್ಸ್‌, 2032ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಭಾರತ ಆಸಕ್ತಿ ತೋರಿದೆ ಎನ್ನುವುದನ್ನು ಮರೆಯುವ ಹಾಗಿಲ್ಲ.

ಕ್ರೀಡಾ ಲೋಕದಲ್ಲಿ ದೈತ್ಯ ಹೆಜ್ಜೆಗಳನ್ನಿಡುತ್ತಾ ಸಾಗಿರುವ ಭಾರತಕ್ಕೆ, ಐಒಸಿ ವೀಸಾ ವಿಚಾರವನ್ನು ಮುಂದಿಟ್ಟುಕೊಂಡು ಅಡ್ಡಿಯಾಗಲು ಹೊರಟಿದೆ. ಆರ್ಥಿಕವಾಗಿ, ರಾಜಕೀಯವಾಗಿ ದೊಡ್ಡ ಶಕ್ತಿಯಾಗಿರುವ ಭಾರತ, ತನ್ನ ಸಾಮರ್ಥ್ಯ ಬಳಸಿ ರಾಜತಾಂತ್ರಿಕ ನಡೆ ಮೂಲಕ ಐಒಸಿ ವಿರುದ್ಧ ಸಿಡಿದೇಳಬೇಕಿದೆ. ಇದಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ಭಾರತ ತನ್ನ ಬಳಿ ಇರುವ ಕ್ರೀಡಾಕೂಟಗಳ ಆತಿಥ್ಯ ಹಕ್ಕನ್ನು ಉಳಿಸಿಕೊಳ್ಳುವುದರ ಜತೆಗೆ ಉಗ್ರವಾದ ಬೆಂಬಲಿಸುವ ರಾಷ್ಟ್ರಗಳಿಗೆ ಪ್ರವೇಶ ನಿರಾಕರಿಸುವುದಕ್ಕೂ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.


ಭಾರತಕ್ಕೆ ಕೈತಪ್ಪಬಹುದಾದ ಆತಿಥ್ಯ

(ಆತಿಥ್ಯ ಹಕ್ಕು ಭಾರತದ ಬಳಿ ಇದೆ)

ಜೂ.6ರಿಂದ 16ರ ವರೆಗೂ ಭುವನೇಶ್ವರದಲ್ಲಿ ಪುರುಷರ ಹಾಕಿ ಸೀರೀಸ್‌ ಫೈನಲ್ಸ್‌ ಪಂದ್ಯಾವಳಿ

ಜು.17ರಿಂದ 22ರ ವರೆಗೂ ಒಡಿಶಾದಲ್ಲಿ ಕಾಮನ್ವೆಲ್ತ್‌ ಟೇಬಲ್‌ ಟೆನಿಸ್‌ ಪಂದ್ಯಾವಳಿ

ಜು.9ರಿಂದ 14ರ ವರೆಗೂ ಏಷ್ಯನ್‌ ಕಿರಿಯರ ಕುಸ್ತಿ ಚಾಂಪಿಯನ್‌ಶಿಪ್‌

2020ರಲ್ಲಿ ಸಂಯೋಜಿತ ಶೂಟಿಂಗ್‌ ವಿಶ್ವಕಪ್‌

ಬಿಡ್‌ ಸಲ್ಲಿಕೆ ಪ್ರಸ್ತಾಪ

2020ರ ಏಪ್ರಿಲ್‌ನಲ್ಲಿ ಏಷ್ಯಾ-ಓಷಿಯಾನಿಯಾ ಬಾಕ್ಸಿಂಗ್‌ ಒಲಿಂಪಿಕ್‌ ಅರ್ಹತಾ ಟೂರ್ನಿ

2020ರಲ್ಲಿ ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ವಿಶ್ವಕಪ್‌