ಗೋವಾ(ಸೆ. 19): ಎಎಫ್'ಸಿ ಕಪ್ ಅಂಡರ್-16 ಫುಟ್ಬಾಲ್ ಟೂರ್ನಿಯಲ್ಲಿ ಭಾರತ ನಾಕೌಟ್ ಹಂತ ಪ್ರವೇಶಿಸುವ ಸಾಧ್ಯತೆಯನ್ನು ಜೀವಂತವಾಗಿದೆ. ನಿನ್ನೆ ರಾತ್ರಿ ನಡೆದ ಎ ಗುಂಪಿನ ಪಂದ್ಯದಲ್ಲಿ ಸೌದಿ ಅರೇಬಿಯಾ ಎದುರು ಭಾರತೀಯರು 3-3 ಗೋಲುಗಳಿಂದ ಡ್ರಾ ಸಾಧಿಸಿದ್ದಾರೆ. ಹೆಚ್ಚುವರಿ ಸಮಯದಲ್ಲಿ ನಾಯಕ ಸುರೇಶ್ ಸಿಂಗ್ ವಾಂಗ್'ಜಾಮ್ ಅವರು ಗೋಲು ಗಳಿಸಿ ತಂಡಕ್ಕೆ ಅತ್ಯಗತ್ಯವಾಗಿದ್ದ ಪಾಯಿಂಟ್ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪಂದ್ಯದ ಮೊದಲಾರ್ಧದ ಆರಂಭದಲ್ಲಿ ಭಾರತೀಯರು ಆಟಕ್ಕೆ ಬೇಗ ಕುದುರಿಕೊಂಡು ಪ್ರಾಬಲ್ಯ ಮೆರೆದರು. 22 ನಿಮಿಷಗಳಷ್ಟರಲ್ಲಿ ಭಾರತ ಎರಡು ಗೋಲುಗಳ ಭರ್ಜರಿ ಮುನ್ನಡೆ ಪಡೆದುಕೊಂಡಿತು. ಮಿಡ್'ಫೀಲ್ಡರ್ ಅನಿಕೇತ್ ಜಾಧವ್ 6ನೇ ನಿಮಿಷದಲ್ಲಿ ಗೋಲು ಗಳಿಸಿದರು. ಸ್ಟ್ರೈಕರ್ ಅಮನ್ ಚೇಟ್ರಿ 22ನೇ ನಿಮಿಷದಲ್ಲಿ ಗೋಲು ಗಳಿಸಿದರು. ಆದರೆ, ಅಲ್ಲಿಂದಾಚೆ ಸೌದಿ ಅರೇಬಿಯಾ ಸತತವಾಗಿ ಆಕ್ರಮಣ ನಡೆಸಿ ಭಾರತೀಯರನ್ನು ಕಂಗೆಡೆಸಿದರು. 32ನೇ ನಿಮಿಷದಲ್ಲಿ ಸುಲೇಮಾನ್ ಅವರ ಅದ್ಭುತ ಗೋಲ್ ಮೂಲಕ ಸೌದಿಗೆ ಮೊದಲ ಯಶಸ್ಸು ಸಿಕ್ಕಿತು. ಭಾರತೀಯರಿಗಿಂತ ಹೆಚ್ಚು ಚುರುಕಿನ ದಾಳಿ ನಡೆಸಿದರೂ ಆತಿಥೇಯರ ಪ್ರಬಲ ರಕ್ಷಣಾ ಕೋಟೆಯಿಂದಾಗಿ ಸೌದಿ ಅರೇಬಿಯಾಗೆ ಮೊದಲಾರ್ಧದಲ್ಲಿ ಹೆಚ್ಚು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಗೋಲ್'ಕೀಪರ್ ಧೀರಜ್ ಸಿಂಗ್ ಉತ್ತಮ ಪ್ರದರ್ಶನ ನೀಡಿದರು. ಮೊದಲಾರ್ಧ ಮುಗಿಯುವ ಕೊನೆಯ ಕ್ಷಣದಲ್ಲಿ ಸೌದಿಗೆ ಪೆನಾಲ್ಟಿ ಸಿಕ್ಕರೂ ಮಾಲಿ ಅದನ್ನು ಗೋಲಾಗಿಸುವಲ್ಲಿ ವಿಫಲರಾದರು. ಭಾರತ 2-1 ಮುನ್ನಡೆಯಲ್ಲಿ ಫಸ್ಟ್ ಹಾಫ್ ಮುಗಿಸಿತು.
ತಿರುಗಿಬಿದ್ದ ಸೌದಿ:
ದ್ವಿತೀಯಾರ್ಧದಲ್ಲಿ ಭಾರತ ತನ್ನ ಲೀಡನ್ನು ಕಾಯ್ದಿರಿಸಿಕೊಳ್ಳಲು ಬಹಳ ಪರಿಶ್ರಮ ಪಟ್ಟಿತು. ಸೌದಿ ಎಂದಿನಂತೆ ಪ್ರಾಬಲ್ಯ ಮೆರೆದರೂ ಹಲವು ಹೊತ್ತು ಗೋಲು ಗಳಿಸಲು ಆಗಲಿಲ್ಲ. ಆದರೆ, 82 ಮತ್ತು 83ನೇ ನಿಮಿಷದಲ್ಲಿ ಅಲ್'ಬ್ರಿಕಾನ್ ಅವರು ಮಿಂಚಿನ ಗತಿಯಲ್ಲಿ ಎರಡು ಗೋಲು ಗಳಿಸಿ ಸೌದಿಗೆ ಮುನ್ನಡೆ ತಂದುಕೊಟ್ಟರು. ಭಾರತೀಯರು ಅಕ್ಷರಶಃ ಕಂಗೆಟ್ಟುಹೋದರು. ಆದರೆ, ನಾಯಕ ಸುರೇಶ್ ಸಿಂಗ್ ಹೆಚ್ಚುವರಿ ಅವಧಿಯಲ್ಲಿ ಗೋಲು ಗಳಿಸಿ ಸರಿಸಮ ಮಾಡಿದರು.
ತನ್ನ ಹಿಂದಿನ ಪಂದ್ಯದಲ್ಲಿ ಯುಎಇ ವಿರುದ್ಧ ಭಾರತ ಆರಂಭದಲ್ಲಿ ಮುನ್ನಡೆ ಸಾಧಿಸಿದರೂ ಪಂದ್ಯವನ್ನು ಕೈಚೆಲ್ಲಿತ್ತು. ಆ ಕಹಿ ಪುನಾವರ್ತನೆಯಾಗುವುದು ತಪ್ಪಿತು. ಈ ಡ್ರಾ ಸಾಧನೆಯಿಂದ ಭಾರತೀಯರು ಒಂದು ಅಂಕ ಪಡೆದುಕೊಂಡಿದ್ದಾರೆ. ಸೌದಿ ಅರೇಬಿಯಾಗೂ ಇದು ಮೊದಲ ಅಂಕವಾಗಿದೆ.
ಇದೇ ವೇಳೆ, ಇದೇ ಗುಂಪಿನಲ್ಲಿ ಯುಎಇ ಹಾಗೂ ಇರಾನ್ ನಡುವಿನ ಪಂದ್ಯವೂ 1-1 ಗೋಲಿನಿಂದ ಡ್ರಾನಲ್ಲಿ ಅಂತ್ಯವಾಗಿದೆ.
ಭಾರತ ಕ್ವಾರ್ಟರ್'ಫೈನಲ್'ಗೇರುತ್ತಾ?
ಸೆ.21ರಂದು ಇರಾನ್ ವಿರುದ್ಧ ಭಾರತ ತನ್ನ ಕೊನೆಯ ಪಂದ್ಯವನ್ನು ಆಡಲಿದೆ. ಸೌದಿ ತಂಡವು ಯುಎಇಯನ್ನು ಎದುರಿಸಲಿದೆ. ಅಂಕಪಟ್ಟಿಯಲ್ಲಿ ಯುಎಇ ಮತ್ತು ಇರಾನ್ ತಂಡಗಳು 4 ಅಂಕ ಪಡೆದು ಮೊದಲೆರಡು ಸ್ಥಾನದಲ್ಲಿವೆ. ಭಾರತ ಮತ್ತು ಸೌದಿ ಅರೇಬಿಯಾ ತಲಾ ಒಂದೊಂದು ಅಂಕ ಪ್ರಾಪ್ತಿ ಮಾಡಿಕೊಂಡಿವೆ. ಆದರೆ, ಬುಧವಾರ ನಡೆಯುವ ಗುಂಪಿನ ಕೊನೆಯ ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ಸೌದಿ ತಂಡಗಳು ಗೆಲುವ ಸಾಧಿಸಿ ಕ್ವಾರ್ಟರ್'ಫೈನಲ್'ಗೆ ಏರುವ ಅವಕಾಶ ಇದ್ದೇ ಇದೆ. ಆದರೆ, ಇರಾನ್ ಮತ್ತು ಯುಎಇ ತಂಡಗಳು ತಮ್ಮ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಸಾಕು ನಾಕೌಟ್ ಹಂತಕ್ಕೇರುವ ಭಾಗ್ಯ ಹೊಂದಿವೆ.
