Asianet Suvarna News Asianet Suvarna News

ಏಷ್ಯಾ ಅಥ್ಲೆಟಿಕ್ಸ್; ಮೊದಲ ಬಾರಿ ಭಾರತಕ್ಕೆ ಅಗ್ರಸ್ಥಾನ; ಚೀನಾಗೆ ನಿರಾಸೆ

12 ಚಿನ್ನದೊಂದಿಗೆ 29 ಪದಕ ಗೆದ್ದು ಮೊದಲ ಸ್ಥಾನ ಪಡೆದ ಆತಿಥೇಯ ಭಾರತ | ಹೆಪ್ಟಥ್ಲಾನ್'ನಲ್ಲಿ ಚಿನ್ನ ಗೆದ್ದು ಬೀಗಿದ ಸ್ವಪ್ನಾ ಬರ್ಮಾನ್ | ಕೊನೆಯ ದಿನ ಜಾವೆಲಿನ್ ಥ್ರೋವರ್ ನೀರಜ್'ಗೂ ಒಲಿದ ಬಂಗಾರ | ವಿಶ್ವಚಾಂಪಿಯನ್'ಶಿಪ್'ಗೆ ಅರ್ಹತೆ ಪಡೆದ ಭಾರತದ 11 ಅಥ್ಲೀಟ್'ಗಳು.

india first place in asian athletics championships

ಭುನವೇಶ್ವರ್: 22ನೇ ಏಷ್ಯನ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಿಂದೆಂದೂ ಕಂಡರಿಯದ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಅತ್ಯಧಿಕ 12 ಚಿನ್ನಗಳೊಂದಿಗೆ 29 ಪದಕಗಳನ್ನು ಗೆದ್ದು ಅಗ್ರಸ್ಥಾನ ಪಡೆದಿದೆ. ಭಾರತ ತಂಡ 12 ಚಿನ್ನ, 5 ಬೆಳ್ಳಿ ಮತ್ತು 12 ಕಂಚಿನ ಪದಕ ಗೆದ್ದು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. 1973ರಿಂದ ಆರಂಭವಾಗಿರುವ ಈ ಕೂಟದಲ್ಲಿ ಭಾರತ 1985ರಲ್ಲಿ 10 ಚಿನ್ನದೊಂದಿಗೆ 22 ಪದಕ ಮತ್ತು 1989ರಲ್ಲಿ 8 ಚಿನ್ನದೊಂದಿಗೆ 22 ಪದಕ ಜಯಿಸಿತ್ತು. ನಂತರದ ವರ್ಷಗಳಲ್ಲಿ ಭಾರತದ ಅಥ್ಲೀಟ್'ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಆದರೆ, ಈ ಬಾರಿ ಭಾರತ ಅಥ್ಲೆಟಿಕ್ಸ್ ತಂಡ ಎಲ್ಲಾ ರಾಷ್ಟ್ರಗಳನ್ನು ಹಿಂದಿಕ್ಕುವ ಮೂಲಕ ಅಗ್ರಸ್ಥಾನ ಪಡೆದಿದೆ.

ಇಲ್ಲಿಯವರೆಗೂ 22 ಕೂಟಗಳು ನಡೆದಿವೆ. ಇದರಲ್ಲಿ ನೆರೆಯ ರಾಷ್ಟ್ರ ಚೀನಾದ ಅಥ್ಲೀಟ್'ಗಳು ಪದಕಗಳ ಪಟ್ಟಿಯಲ್ಲಿ ಗರಿಷ್ಠ ಬಾರಿ ಮಿಂಚಿದ ಸಾಧನೆ ಮಾಡಿದ್ದಾರೆ. ಚೀನಾ ಸುಮಾರು 15ಕ್ಕೂ ಹೆಚ್ಚು ಬಾರಿ ಪದಕಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ, ಜಪಾನ್ ಎರಡನೇ ಸ್ಥಾನದಲ್ಲಿದೆ. ಕತಾರ್, ಇರಾನ್ ತಂಡಗಳೂ ಕೂಡ ಅಗ್ರಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಿದ ಇನ್ನಿತರ ತಂಡಗಳಾಗಿವೆ.

ಭಾರತದ ತಾರಾ ಅಥ್ಲೀಟ್'ಗಳಾದ ಕರ್ನಾಟಕ ಎಂ.ಆರ್.ಪೂವಮ್ಮ., ಜಿಶ್ನಾ, ಮುಜುಂದಾರ್ ಮತ್ತು ನಿರ್ಮಲಾ ಅವರನ್ನೊಳಗೊಂಡ ರಿಲೇ ತಂಡ ಸೇರಿದಂತೆ ಸ್ವಪ್ನ ಬರ್ಮನ್, ಗೋವಿಂದನ್ ಲಕ್ಷ್ಮಣನ್, ಜಿನ್ಸನ್ ಜಾನ್ಸನ್ ಮತ್ತು ಪೂರ್ಣಿಮಾ ಹೆಂಬ್ರಾಮ್ ಅವರು ಕೂಟದ ನಾಲ್ಕನೇ ಹಾಗೂ ಕೊನೆಯ ದಿನವಾದ ಭಾನುವಾರ 5 ಚಿನ್ನ, 1 ಬೆಳ್ಳಿ, 3 ಕಂಚಿನ ಪದಕ ಗೆದ್ದಿತು. ಸ್ವಪ್ನ ಬರ್ಮಾನ್, ಲಕ್ಷ್ಮಣನ್ ವಿಶ್ವ ಚಾಂಪಿಯನ್'ಶಿಪ್'ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯರ ವಿಭಾಗದ ಹೆಪ್ಟಥ್ಲಾನ್ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಾ ಬರ್ಮಾನ್ 5942 ಅಂಕ ಗಳಿಸುವ ಮೂಲಕ ಚಿನ್ನದ ಪದಕ ಗೆದ್ದರು. ಬರ್ಮಾನ್ ಶನಿವಾರವಷ್ಟೇ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇನ್ನು, ಇದೇ ಸ್ಪರ್ಧೆಯಲ್ಲಿ ಜಪಾನ್'ನ ಮೆಗ್ ಹೆಂಫಿಲ್ 5883 ಅಂಕ ಗಳಿಸಿ ಬೆಳ್ಳಿ ಪದಕ ಪಡೆದರೆ, ಭಾರತದ ಹೆಂಬ್ರಾಮ್ 5798 ಅಂಕ ಗಳಿಸಿ ಕಚಿನ ಪದಕ ಪಡೆದರು. ಮಹಿಳೆಯರ 800 ಮೀಟರ್ ಓಟದಲ್ಲಿ ಪದಕದ ಭರವಸೆ ಮೂಡಿಸಿದ್ದ ಟಿಂಟು ಲೂಕಾ ನೀರಸ ಪ್ರದರ್ಶನದಿಂದಾಗಿ ಪದಕ ವಂಚಿತರಾಗಿದ್ದಾರೆ. ಲುಕಾ ಸ್ಪರ್ಧೆಯನ್ನು ಪೂರ್ಣಗೊಳಿಸುವಲ್ಲಿ ವಿಫಲರಾದರು. ಜ್ವರ ಮತ್ತು ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿರುವ ಕಾರಣದಿಂದ ಲುಕಾ ಸ್ಪರ್ಧೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಕೋಚ್ ಪಿ.ಟಿ.ಉಷಾ ಹೇಳಿದ್ದಾರೆ. ಪುರುಷರ 800 ಮೀಟರ್ ಓಟದಲ್ಲಿಲ ಭಾರತದ ಜಿನ್ಸನ್ ಜಾನ್ಸನ್ 1:50:07 ಸೆಕೆಂಡ್'ಗಳಲ್ಲಿ ಗುರಿ ತಲುಪುವ ಮೂಲಕ ಕಂಚಿನ ಪದಕ ಪಡೆದರು.

ನೀರಜ್ ಚೋಪ್ರಾಗೆ ಚಿನ್ನ:
ಭಾರತದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ 85.23 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಥ್ರೋವರ್ ದೇವೇಂದ್ರ ಸಿಂಗ್ 83.29 ಮೀಟರ್ ದರೂ ಎಸೆದು ಕಂಚು ಪದಕ ಗೆದ್ದರು.

200 ಮೀ.ನಲ್ಲಿ ದ್ಯುತಿ ನಿರಾಸೆ:
ವಿವಾದಿತ ವೇಗದ ಓಟಗಾರ್ತಿ ಭಾರತದ ದ್ಯುತಿ ಚಾಂಚ್ ಮಹಿಳೆಯರ 200 ಮೀಟರ್ ಓಟದಲ್ಲಿ ಪದಕ ಗೆಲ್ಲುವಲ್ಲಿ ಹಿಂದೆ ಬಿದ್ದರು. ಈ ಸ್ಪರ್ಧೆಯಲ್ಲಿ ದ್ಯುತಿ 4 ಮತ್ತು ಸರ್ಬಾನಿ ನಂದಾ 5ನೇ ಸ್ಥಾನ ಪಡೆದರು.

ರಿಲೇಯಲ್ಲಿ ಅಥ್ಲೀಟ್'ಗಳ ಚಿನ್ನದ ಸಾಧನೆ:
ಪುರುಷರ 4X400 ಮೀಟರ್ ರಿಲೇಯಲ್ಲಿ ಭಾರತದ ಕುಂಜು ಮಹಮದ್, ಮಹಮದ್ ಅನಾಸ್, ಅಮೊ ಜೆ.ಜೇಕಬ್ ಮತ್ತು ಅರೋಕ್ಯ ರಾಜೀವ್ ಅವರನ್ನೊಳಗೊಂಡ ತಂಡ 3:02:92 ಸೆಕೆಂಡ್'ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಗೆದ್ದಿತು. ಈ ಸ್ಪರ್ಧೆಯಲ್ಲಿ ಶ್ರೀಲಂಕಾ ತಂಡ ಬೆಳ್ಳಿ ಮತ್ತು ಥಾಯ್ಲೆಂಡ್ ಕಂಚಿನ ಪದಕ ಗೆದ್ದಿತು.

ಮಹಿಳೆಯರ 4X400 ಮೀಟರ್ ರಿಲೇಯಲ್ಲಿ ಭಾರತದ ಎಂ.ಆರ್.ಪೂವಮ್ಮಾ, ಜಿಶ್ನಾ ಮ್ಯಾಥ್ಯೂ, ಮುಜುಂದಾರ್ ಮತ್ತು ನಿರ್ಮಲಾ ಅವರನ್ನೊಳಗೊಂಡ ತಂಡವು 3:14:75 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಜಯಿಸಿತು. ಇನ್ನುಳಿಸದಂತೆ ಲಾಂಗ್ ಜಂಪ್'ನಲ್ಲಿ ಭಾರತದ ಅಂಕಿತ್ ಶರ್ಮಾ 7.83 ಮೀಟರ್ ದೂರ ಜಿಗಿಯುವ ಮೂಲಕ 4ನೇ ಸ್ಥಾನ, ಸಂಶೀರ್ 7.47 ಮೀಟರ್ ದೂರ ಜಿಗಿದು 11ನೇ ಸ್ಥಾನ ಪಡೆದರು.

2 ಚಿನ್ನ ಗೆದ್ದ ಲಕ್ಷ್ಮಣನ್:
ಪುರುಷರ 10,000 ಮೀಟರ್ ಓಟದಲ್ಲಿ ಗೋವಿಂದನ್ ಲಕ್ಷ್ಮಣ್ 26:13:36 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಜಯಿಸಿದರು. ಇದೇ ಸ್ಪರ್ಧೆಯಲ್ಲಿ ಭಾರತದ ಗೋಪಿ ಶೊನಾಕಲ್ 29:40:32 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು. ಈ ಹಿಂದೆ ನಡೆದಿದ್ದ 5000 ಮೀಟರ್ ಓಟದಲ್ಲೂ ಲಕ್ಷ್ಮಣನ್ ಚಿನ್ನದ ಪದಕ ಗೆದ್ದಿದ್ದರು. ಈ ಸಾಧನೆಯೊಂದಿಗೆ ಲಕ್ಷ್ಮಣನ್ ಮುಂದಿನ ತಿಂಗಳು ಲಂಡನ್'ನಲ್ಲಿ ನಡೆಯಲಿರುವ ವಿಶ್ವಚಾಂಪಿಯನ್'ಶಿಪ್'ಗೆ ಅರ್ಹತೆ ಪಡೆದರು.

Follow Us:
Download App:
  • android
  • ios