ಇದೀಗ ಶುಕ್ರವಾರ ನಡೆಯುವ ಉಪಾಂತ್ಯದಲ್ಲಿ ಭಾರತ ತಂಡ, ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್‌'ನಲ್ಲಿ ಹಾಲಿ ಚಾಂಪಿಯನ್ ಜರ್ಮನಿ ತಂಡ, ಬೆಲ್ಜಿಯಂ ಎದುರು ಸೆಣಸಲಿದೆ.
ಲಕ್ನೋ(ಡಿ.15): ಪಂದ್ಯದ ಕೊನೇ ಕ್ಷಣಗಳಲ್ಲಿ ಸಿಮ್ರನ್ ಜೀತ್ ಸಿಂಗ್ ಮತ್ತು ಹರ್ಮನ್ಪ್ರೀತ್ ಸಿಂಗ್ ಗಳಿಸಿದ ಆಕರ್ಷಕ ಗೋಲಿನಿಂದಾಗಿ ಭಾರತ, ಪ್ರವಾಸಿ ಸ್ಪೇನ್ ಎದುರು ಕಿರಿಯರ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ 2-1 ಗೋಲುಗಳಿಂದ ಜಯ ಸಾಧಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ.
ಇದೀಗ ಶುಕ್ರವಾರ ನಡೆಯುವ ಉಪಾಂತ್ಯದಲ್ಲಿ ಭಾರತ ತಂಡ, ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್'ನಲ್ಲಿ ಹಾಲಿ ಚಾಂಪಿಯನ್ ಜರ್ಮನಿ ತಂಡ, ಬೆಲ್ಜಿಯಂ ಎದುರು ಸೆಣಸಲಿದೆ.
ಇಲ್ಲಿನ ಮೇಜರ್ ಧ್ಯಾನ್ಚಂದ್ ಆ್ಯಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಭಾರತ ತಂಡದ ಪರ ಸಿಮ್ರನ್ಜೀತ್ ಸಿಂಗ್ 57ನೇ ನಿ., ಹರ್ಮನ್ಪ್ರೀತ್ ಸಿಂಗ್ 66ನೇ ನಿಮಿಷದಲ್ಲಿ ಗೋಲುಗಳಿಸಿದರು. ಇತ್ತ ಸ್ಪೇನ್ ಪರ ಮಾರ್ಕ್ ಸೆರ್ರಾಹಿಮಾ 22ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಪಂದ್ಯದ ಆರಂಭದಲ್ಲಿ ಗೋಲುಗಳಿಸುವ ವಿಶ್ವಾಸದಲ್ಲಿ ಕಣಕ್ಕಿಳಿದಿದ್ದ ಎರಡು ತಂಡಗಳ ಆಟಗಾರರಿಗೆ ನಿರಾಸೆ ಕಾದಿತ್ತು. ಮೊದಲ ಕ್ವಾರ್ಟರ್'ನಲ್ಲಿ ಗೋಲಿಗಾಗಿ ಸಾಕಷ್ಟು ಹವಣಿಸಿದರೂ ಗೋಲು ಮೂಡಲಿಲ್ಲ. ಆದರೆ ಎರಡನೇ ಕ್ವಾರ್ಟರ್ನ ಆರಂಭದ 7ನೇ ನಿಮಿಷದಲ್ಲಿ ಸ್ಪೇನ್'ನ ಮಾರ್ಕ್ ಸೆರ್ರಾಹಿಮಾ ಪೆನಾಲ್ಟಿ ಕಾರ್ನರ್ ಮೂಲಕ ಗೋಲುಗಳಿಸಿ 1-0 ಮುನ್ನಡೆ ನೀಡಿದರು. ಇದರಿಂದ ಆಘಾತ ಅನುಭವಿಸಿದ ಭಾರತದ ಆಟಗಾರರು ಗೋಲುಗಳಿಸಲು ಹಲವು ಬಾರಿ ಯತ್ನಿಸಿದರು. ಆದರೂ ಗೋಲುಗಳಿಸಲು ಸಾಧ್ಯವಾಗಲಿಲ್ಲ. ಮೊದಲಾರ್ಧದ ಅಂತ್ಯಕ್ಕೆ ಪ್ರವಾಸಿ ಸ್ಪೇನ್ ತಂಡ 1-0 ಮುನ್ನಡೆಯೊಂದಿಗೆ ಆತಿಥೇಯರನ್ನು ಹಿಂದಿಕ್ಕಿತು.
ದ್ವಿತೀಯಾರ್ಧದ ಆಟದಲ್ಲಿ ಮತ್ತಷ್ಟು ಪ್ರಭಾವಿ ಆಟಕ್ಕೆ ಮುಂದಾದ ಹರ್ಜೀತ್ ಸಿಂಗ್ ಪಡೆ, ಸ್ಪೇನ್ ತಂಡದ ರಕ್ಷಣಾ ವಿಭಾಗವನ್ನು ಬೇಧಿಸಿ ಮುನ್ನಡೆದರೂ ಗೋಲುಗಳಿಸುವಲ್ಲಿ ಸಫಲವಾಗಲಿಲ್ಲ. ಮೂರನೇ ಕ್ವಾರ್ಟರ್'ನಲ್ಲಿ ಎರಡು ತಂಡಗಳು ಯಾವುದೇ ಗೋಲುಗಳಿಸಲಿಲ್ಲ. ಸ್ಪೇನ್ ಮತ್ತದೇ ಮುನ್ನಡೆ ಕಾಯ್ದುಕೊಂಡಿತ್ತು. ನಾಲ್ಕನೇ ಕ್ವಾರ್ಟರ್'ನಲ್ಲಿ ಭಾರತ ತಂಡದ ಆಟಗಾರರು ಗೋಲುಗಳಿಸಲು ವಿಭಿನ್ನ ತಂತ್ರಗಾರಿಕೆಯ ಆಟಕ್ಕೆ ಮುಂದಾದರು.
ಆದರೂ ಗೋಲುಗಳು ಮೂಡಲಿಲ್ಲ. ಪಂದ್ಯದ ಮುಕ್ತಾಯಕ್ಕೆ 3ನಿಮಿಷಗಳು ಬಾಕಿ ಇದ್ದಾಗ ಸಿಮ್ರನ್'ಜೀತ್ ಸಿಂಗ್ ಪೆನಾಲ್ಟಿ ಕಾರ್ನರ್ನಲ್ಲಿ ಗೋಲುಗಳಿಸಿ 1-1ರಿಂದ ಸಮಬಲ ಸಾಧಿಸಿದರು. ಆಗ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತು ಭಾರತ ತಂಡದ ಆಟಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಪೂರ್ಣಾವಧಿ ಆಟದಲ್ಲಿ ಪಂದ್ಯ ಸಮಬಲವಾಗಿದ್ದರಿಂದ ಹೆಚ್ಚುವರಿ ನಿಮಿಷಗಳನ್ನು ನೀಡಲಾಯಿತು. ಈ ಆಟದ 6ನೇ ನಿಮಿಷದಲ್ಲಿ ಹರ್ಮನ್'ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ದಾಖಲಿಸಿ ತಂಡಕ್ಕೆ 2-1ರ ಮುನ್ನಡೆ ನೀಡಿದ್ದಲ್ಲದೇ ಜಯವನ್ನು ಸುಗಮಗೊಳಿಸಿದರು.
