ಬೆಂಗಳೂರು[ಜು.08]: ಟೀಂ ಇಂಡಿಯಾಗೆ ಹೊಸ ಹುರುಪು ತುಂಬಿದ್ದ ಖಡಕ್ ನಾಯಕ ಸೌರವ್ ಗಂಗೂಲಿ ಇಂದು 47ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ನಾಯಕ ಎನ್ನುವ ಖ್ಯಾತಿ ಹೊಂದಿರುವ ದಾದಾ ತಮ್ಮ ಸ್ಫೋಟಕ ಬ್ಯಾಟಿಂಗ್’ನಿಂದಲೂ ಅಭಿಮಾನಿಗಳನ್ನು ರಂಜಿಸಿದ್ದರು.

’ಬೆಂಗಾಲ್ ಟೈಗರ್’, ’ಗಾಡ್ ಆಫ್ ಆಫ್’ ಸೈಡ್ ಎಂಬ ನಿಕ್ ನೇಮ್ ಹೊಂದಿದ್ದ ಗಂಗೂಲಿ 08 ಜುಲೈ 1972ರಲ್ಲಿ ಜನಿಸಿದ್ದರು. ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ವಿವಾದದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ನಾಯಕತ್ವ ವಹಿಸಿಕೊಂಡ ದಾದಾ, ತಮ್ಮ ಆಕ್ರಮಣಕಾರಿ ನಿಲುವಿನಿಂದಲೇ ಭಾರತಕ್ಕೆ ಹೊಸ ಮೆರುಗು ತಂದಿತ್ತಿದ್ದರು. ಲಾರ್ಡ್ಸ್’ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಗಂಗೂಲಿ, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದರು. ನಿನ್ನೆಯಷ್ಟೇ ಟೀಂ ಇಂಡಿಯಾದ ಮತ್ತೋರ್ವ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. 

ಧೋನಿಗಿಂದು 38ನೇ ಹುಟ್ಟುಹಬ್ಬದ ಸಂಭ್ರಮ

ಗಂಗೂಲಿ 311 ಏಕದಿನ ಪಂದ್ಯಗಳಲ್ಲಿ 11,363 ಬಾರಿಸುವುದರೊಂದಿಗೆ ಪ್ರಸ್ತುತ ಭಾರತ ಪರ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅದರಲ್ಲೂ ಸಚಿನ್ ತೆಂಡುಲ್ಕರ್ ಜತೆ ಅದ್ಭುತ ಜತೆಯಾಟ ನಿಭಾಯಿಸಿದ್ದ ದಾದಾ ಬರೋಬ್ಬರಿ 6,609 ರನ್ ಕಲೆಹಾಕಿದ್ದರು. ಈ ಕಿಲಾಡಿ ಜೋಡಿ 21 ಶತಕದ ಜತೆಯಾಟವಾಡಿದ್ದು ಇಂದಿಗೂ ದಾಖಲೆಯಾಗಿಯೇ ಉಳಿದಿದೆ.

ದಾದಾನ ದಾದಾಗಿರಿ ನೋಡಿ... 

 

ಧೋನಿ-ಜಾಧವ್ ವಿರುದ್ಧ ಕಿಡಿಕಾರಿದ ದಾದಾ..!

2000ನೇ ಇಸವಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ದಾದಾ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದರು. ಇದರ ಜತೆಗೆ ಪಾಕಿಸ್ತಾನವನ್ನು ಅವರ ನೆಲದಲ್ಲೇ ಬಗ್ಗುಬಡಿದಿತ್ತು. ಇವೆಲ್ಲವುದರ ಜತೆಗೆ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ನಾಟ್ ವೆಸ್ಟ್ ಸೀರೀಸ್ ನ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಕಪ್ ಜಯಿಸಿತ್ತು. ಅದರಲ್ಲೂ ಇಂಗ್ಲೆಂಡ್ ತಂಡವನ್ನು ರೋಚಕವಾಗಿ ಮಣಿಸುತ್ತಿದ್ದಂತೆ ಲಾರ್ಡ್ಸ್ ಬಾಲ್ಕನಿಯಲ್ಲಿದ್ದ ಗಂಗೂಲಿ ತಮ್ಮ ಶರ್ಟ್ ಬಿಚ್ಚಿ ಗಾಳಿಯಲ್ಲಿ ಬೀಸಿದ್ದು ಇಂದಿಗೂ, ಎಂದೆಂದಿಗೂ ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗೆ ಎವರ್ ಗ್ರೀನ್ ಕ್ಷಣ. ಆ ಬಳಿಕ 2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಫೈನಲ್’ವರೆಗೂ ಮುಂದುವರೆಸಿದ್ದರು. 

ಟೀಂ ಇಂಡಿಯಾದ ಯಶಸ್ವಿ ನಾಯಕ, ಬ್ಯಾಟ್ಸ್‌ಮನ್, ಬೌಲರ್, ಕಾಮೆಂಟೇಟರ್, ಹೀಗೆ ಬಹುಮುಖ ಪ್ರತಿಭೆಯ ಸೌರವ್ ಗಂಗೂಲಿಗೆ ಸುವರ್ಣನ್ಯೂಸ್.ಕಾಂ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು