ಭಾರತದ ಪರ ಆರಂಭಿಕರಾದ ಅಜಯ್ ಕುಮಾರ್ ರೆಡ್ಡಿ ಹಾಗೂ ಪ್ರಕಾಶ್ ಜಯರಾಮಯ್ಯ ಭರ್ಜರಿ ಆರಂಭವನ್ನೇ ಒದಗಿಸಿದರು.

ಬೆಂಗಳೂರು(ಫೆ.12): ಅತ್ಯಾಕರ್ಷಕ ಪ್ರದರ್ಶನದ ಮೂಲಕ ಫೈನಲ್ ತಲುಪಿದ್ದ ಅಂಧರ ಟೀಂ ಇಂಡಿಯಾ ಪಾಕಿಸ್ತಾನವನ್ನು 9 ವಿಕೆಟ್'ಗಳ ಅಂತರದಲ್ಲಿ ಮಣಿಸುವ ಮೂಲಕ ಟಿ20 ವಿಶ್ವಕಪ್ ಎತ್ತಿಹಿಡಿಯುವಲ್ಲಿ ಸಫಲವಾಯಿತು.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟಿ20 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ 197 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಈ ಮೂಲಕ 2012ರಲ್ಲಿನ ಹಾಲಿಚಾಂಪಿಯನ್ ಪಟ್ಟವನ್ನು ಮತ್ತೊಮ್ಮೆ ಉಳಿಸಿಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 197/7 ರನ್'ಗಳ ಸವಾಲಿನ ಮೊತ್ತ ಪೇರಿಸಿತು. ಪಾಕ್ ಪರ ಬಾದರ್ ಮುನೀರ್ 57 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಭಾರತದ ಪರ ಕೇತನ್ ಪಟೇಲ್ ಹಾಗೂ ಜಾಫರ್ ಇಕ್ಬಾಲ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಭಾರತದ ಪರ ಆರಂಭಿಕರಾದ ಅಜಯ್ ಕುಮಾರ್ ರೆಡ್ಡಿ ಹಾಗೂ ಪ್ರಕಾಶ್ ಜಯರಾಮಯ್ಯ ಭರ್ಜರಿ ಆರಂಭವನ್ನೇ ಒದಗಿಸಿದರು. 10ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಈ ಜೋಡಿ 10 ಓವರ್'ಗಳ ಮುಕ್ತಾಯಕ್ಕೆ 109 ರನ್ ಕಲೆ ಹಾಕಿದರು.

43 ರನ್ ಬಾರಿಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಅಜಯ್ ಕುಮಾರ್ ರೆಡ್ಡಿ ಇಶ್ರಾರ್ ಹಸನ್'ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಕೇತನ್ ಪಟೇಲ್ 26 ರನ್ ಗಳಿಸಿ ರಿಟೈರ್ಡ್ ಹರ್ಟ್ ತೆಗೆದುಕೊಂಡು ಪೆವಿಲಿಯನ್ ಸೇರಿದರು. ನಂತರ ಜಯರಾಮಯ್ಯಗೆ ಉತ್ತಮ ಸಾಥ್ ನೀಡಿದ ದುನ್ನಾ ವೆಂಕಟೇಶ್ 18ನೇ ಓವರ್'ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜಯರಾಮಯ್ಯ ಕೇವಲ ಒಂದು ರನ್'ನಿಂದ ಶತಕವಂಚಿತರಾದರು, ಅಜೇಯರಾಗಿ ತಂಡವನ್ನು ಗುರಿ ತಲುಪಿಸಿದರು.