* ದಿಲ್ಲಿಯ ಫಿರೋಜ್'ಶಾ ಕೋಟ್ಲಾದಲ್ಲಿ ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯ* ಭಾರತ 202, ಕಿವೀಸ್ 159 ರನ್* ಆಶೀಶ್ ನೆಹ್ರಾ ಕೊನೆಯ ಪಂದ್ಯ; ಗೆಲುವಿನ ವಿದಾಯ* ನ. 4 ಮತ್ತು 7 ಮುಂದಿನ ಎರಡು ಪಂದ್ಯಗಳು ನಡೆಯಲಿವೆ

ನವದೆಹಲಿ(ನ. 02): ಕ್ಯಾಚ್'ಗಳು ಎಷ್ಟು ಮುಖ್ಯ ಎಂಬುದಕ್ಕೆ ಅನೇಕ ಪಂದ್ಯಗಳು ಉದಾಹರಣೆಯಾಗಿವೆ. ನಿನ್ನೆ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಪಂದ್ಯವೂ ಅದಕ್ಕೆ ಸಾಕ್ಷಿಯಾಯಿತು. ಮೂರು ಪ್ರಮುಖ ಆಟಗಾರರ ಕ್ಯಾಚ್'ಗಳನ್ನು ಕೈಬಿಟ್ಟಿದ್ದಕ್ಕೆ ಕಿವೀಸ್ ಪಡೆ ಸೋಲಿನ ಸುಳಿಗೆ ಸಿಲುಕಬೇಕಾಯಿತು. ಭಾರತ ತಂಡ ನಿನ್ನೆ 53 ರನ್'ಗಳಿಂದ ಜಯಭೇರಿ ಭಾರಿಸಿ ಐತಿಹಾಸಿಕ ಗೆಲುವು ಸಾಧಿಸಿತು. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿತು. ಗೆಲ್ಲಲು 203 ರನ್ ಗುರಿ ಪಡೆದ ನ್ಯೂಜಿಲೆಂಡ್ ಕೇವಲ 149 ರನ್ ಸೇರಿಸಲು ಶಕ್ಯವಾಯಿತು. ಎದುರಾಳಿಗೆ ಬೃಹತ್ ಮೊತ್ತ ಕಲೆಹಾಕಲು ಅವಕಾಶ ಮಾಡಿಕೊಟ್ಟ ನ್ಯೂಜಿಲೆಂಡ್ ತಂಡ ತನ್ನ ಚೇಸಿಂಗ್'ನಲ್ಲಿ ಎಲ್ಲಿಯೂ ಪಂದ್ಯ ಗೆಲ್ಲುವ ಆಸೆ ಹೊಂದಿರಲಿಲ್ಲ. ಮೊದಲ ಮೂರ್ನಾಲ್ಕು ಓವರ್'ನಲ್ಲೇ ನ್ಯೂಜಿಲೆಂಡ್ ಸೋಲೊಪ್ಪಿಕೊಂಡಂತಿತ್ತು. ಡೇಂಜರಸ್ ಬ್ಯಾಟ್ಸ್'ಮ್ಯಾನ್ ಟಾಮ್ ಲಾಥಮ್ ಮತ್ತು ಕೇನ್ ವಿಲಿಯಮ್ಸನ್ ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರಿದರೂ ಕಿವೀಸ್ ಬಳಗ ನಿಶ್ಚಿತವಾಗಿ ಸೋಲಿನ ಸುಳಿಗೆ ಸಿಲುಕಿಹೋಗಿತ್ತು.

ನೆಹ್ರಾ ಕೊನೆ ಆಟ:
ಭಾರತದ ಬೌಲರ್'ಗಳು ಮತ್ತೊಮ್ಮೆ ಮಿಂಚಿದರು. ಚಹಲ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಜೋಡಿ ಸೂಪರ್ ಬೌಲಿಂಗ್ ಪ್ರದರ್ಶನ ನೀಡಿದರು. ಹಳೆಯ ಹುಲಿ ಆಶೀಷ್ ನೆಹ್ರಾ ತಮ್ಮ ಕೊತ್ತಕೊನೆಯ ಪಂದ್ಯದಲ್ಲೂ ಬೌಲಿಂಗ್ ಮೊನಚು ಕಳೆದುಕೊಂಡಿಲ್ಲದಿರುವುದನ್ನು ತೋರಿಸಿದರು. ಅವರ ಬೌಲಿಂಗ್ ನೋಡುವುದೇ ಒಂದು ಖುಷಿ. ಫಿರೋಜ್ ಕೋಟ್ಲಾದ ಇಡೀ ಮೈದಾನವೇ ನೆಹ್ರಾ ಅವರ ಕೊನೆಯ ಓವರ್'ಗೆ ಚಪ್ಪಾಳೆ ಹಾಕಿತು. ನೆಹ್ರಾ ನಿವೃತ್ತಿಗೆ ಗೆಲುವಿನ ಗಿಫ್ಟ್ ಕೊಟ್ಟಿತು ಟೀಮ್ ಇಂಡಿಯಾ. 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಆಶೀಶ್ ನೆಹ್ರಾ 18 ವರ್ಷಗಳ ತಮ್ಮ ಕ್ರಿಕೆಟ್ ಪಯಣವನ್ನು ನಿಲ್ಲಿಸಿದ್ದಾರೆ. ಇನ್ಮುಂದೆ ಅವರು ಐಪಿಎಲ್ ಟೂರ್ನಿಯಲ್ಲೂ ಆಡುವುದಿಲ್ಲ.

ದುಬಾರಿ ಕ್ಯಾಚ್'ಗಳು:
ಇದಕ್ಕೆ ಮುನ್ನ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಭರ್ಜರಿ ಆರಂಭ ಪಡೆಯಿತು. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್'ಗೆ ಬರೋಬ್ಬರಿ 158 ರನ್ ಸೇರಿಸಿದರು. ಆದರೆ, ಪಂದ್ಯದ 2ನೇ ಓವರ್'ನಲ್ಲೇ ಧವನ್ 8 ರನ್ ಇದ್ದಾಗ ಅವರ ಕ್ಯಾಚ್'ನ್ನು ಸ್ಯಾಂಟ್ನರ್ ಕೈಬಿಟ್ಟರು. ರೋಹಿತ್ ಶರ್ಮಾ 16 ರನ್ ಇದ್ದಾಗ ಕೊಟ್ಟ ಕ್ಯಾಚ್'ನ್ನು ಟಿಮ್ ಸೌಥಿ ಡ್ರಾಪ್ ಮಾಡಿದರು. ಇಬ್ಬರೂ ತಲಾ 80 ರನ್ ಭಾರಿಸಿ ತಂಡದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು. ಕಿವೀಸ್ ಪಡೆಯ ಕ್ಯಾಚ್ ಡ್ರಾಪಿಂಗ್ ಹಣೆಬರಹ ಇಲ್ಲಿಗೇ ನಿಲ್ಲೋದಿಲ್ಲ. ನಾಯಕ ವಿರಾಟ್ ಕೊಹ್ಲಿ ಕ್ರೀಸ್'ಗೆ ಆರಂಭದಲ್ಲೇ ನೀಡಿದ ಕ್ಯಾಚ್'ನ್ನು ಹಿಡಿಯಲು ಕಿವೀಸ್ ಫೀಲ್ಡರ್ಸ್ ವಿಫಲರಾದರು. ಕೊಹ್ಲಿ ಕೇವಲ 11 ಎಸೆತದಲ್ಲಿ ಅಜೇಯ 26 ರನ್ ಚಚ್ಚಿ ತಂಡದ ಸ್ಕೋರು 200 ರನ್ ಗಡಿದಾಟಿಸಿದರು. ಭಾರತದ ಈ ಸ್ಕೋರು ನ್ಯೂಜಿಲೆಂಡ್ ಪಾಲಿಗೆ ಕಬ್ಬಿಣದ ಕಡಲೆಯಾಯಿತು.

ಭಾರತ ತಂಡ ಈ ಗೆಲುವಿನೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ. 2ನೇ ಮತ್ತು 3ನೇ ಪಂದ್ಯವು ನ. 4 ಮತ್ತು 7ರಂದು ರಾಜಕೋಟ್ ಮತ್ತು ತಿರುವನಂತಪುರಂನಲ್ಲಿ ನಡೆಯಲಿದೆ. ಇನ್ನು, ನ್ಯೂಜಿಲೆಂಡ್ ತಂಡವು ಈ ಸೋಲಿನೊಂದಿಗೆ ಟಿ20 ಕ್ರಿಕೆಟ್'ನ ನಂ.1 ಸ್ಥಾನವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು. ಭಾರತಕ್ಕೆ ಈ ಗೆಲುವು ಐತಿಹಾಸಿಕವೂ ಆಗಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಗಳಿಸಿದ ಮೊದಲ ಟಿ20 ಗೆಲುವು ಇದಾಗಿದೆ

ಸ್ಕೋರು ವಿವರ:

ಭಾರತ 20 ಓವರ್ 202/3
(ರೋಹಿತ್ ಶರ್ಮಾ 80, ಶಿಖರ್ ಧವನ್ 80, ವಿರಾಟ್ ಕೊಹ್ಲಿ ಅಜೇಯ 26 ರನ್ - ಈಶ್ ಸೋಧಿ 25/2)

ನ್ಯೂಜಿಲೆಂಡ್ 20 ಓವರ್ 159/8
(ಟಾಮ್ ಲಾಥಮ್ 39, ಕೇನ್ ವಿಲಿಯಮ್ಸನ್ 28, ಸ್ಯಾಂಟ್ನರ್ ಅಜೇಯ 27 ರನ್ - ಅಕ್ಷರ್ ಪಟೇಲ್ 20/2, ಯುಜವೇಂದ್ರ ಚಹಲ್ 26/2)