ಗೆಲ್ಲಲು ಸಾಧಾರಣ ಮೊತ್ತದ ಗುರಿ ಪಡೆದ ಭಾರತ ನಿರೀಕ್ಷೆಯಂತೆ ಹೆಚ್ಚಿನ ಶ್ರಮವಿಲ್ಲದೇ ಗೆಲುವಿನ ದಡ ಮುಟ್ಟಿತು. ವಿರಾಟ್ ಕೊಹ್ಲಿ ಅಜೇಯ 85 ರನ್ ಗಳಿಸಿ ತಂಡದ ಹಾದಿಯನ್ನು ಸುಗಮಗೊಳಿಸಿದರು. ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಕಬಳಿಸಿ ಅಚ್ಚರಿ ಹುಟ್ಟಿಸಿದ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಹಿಮಾಚಲಪ್ರದೇಶ(ಅ. 16): ಕಿವೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಭಾನುವಾರ ಧರ್ಮಶಾಲಾದ ಗ್ರೌಂಡ್'ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್'ಗಳಿಂದ ನಿರಾಯಾಸಕರ ಗೆಲುವು ಪಡೆಯಿತು. ನ್ಯೂಜಿಲೆಂಡ್'ನ 190 ರನ್'ಗೆ ಪ್ರತಿಯಾಗಿ ಟೀಮ್ ಇಂಡಿಯಾ ಇನ್ನೂ 101 ಎಸೆತ ಬಾಕಿ ಇರುವಂತೆಯೇ ಗುರಿ ಬೆನ್ನತ್ತಿತು. ವಿರಾಟ್ ಕೊಹ್ಲಿ ಅಜೇಯ 85 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಈ ಜಯದ ಮೂಲಕ ಭಾರತವು 5 ಪಂದ್ಯಗಳ ಸರಣಿಯಲ್ಲಿ 1-0ಯ ಮುನ್ನಡೆ ಪಡೆದಿದೆ.

ಟಾಸ್ ಸೋತು ಬ್ಯಾಟಿಂಗ್'ಗೆ ಆಹ್ವಾನಿಸಲ್ಪಟ್ಟ ನ್ಯೂಜಿಲೆಂಡ್ 44 ಓವರ್ ಮುಗಿಯುವಷ್ಟರಲ್ಲಿ 190 ರನ್'ಗೆ ಆಲೌಟ್ ಆಯಿತು. ಟಾಮ್ ಲಾಥಮ್ ಮತ್ತು ಟಿಮ್ ಸೌಥಿ 9ನೇ ವಿಕೆಟ್'ಗೆ 71 ರನ್ ಸೇರಿಸದೇ ಹೋಗಿದ್ದರೆ ಕಿವೀಸ್ ಪಡೆ ಇನ್ನೂ ಅಲ್ಪಮೊತ್ತಕ್ಕೆ ಉರುಳಿಬಿಡುವ ಅಪಾಯವಿತ್ತು. ಆದರೆ, ಆರಂಭಿಕ ಆಟಗಾರ ಲಾಥಮ್ ಅಜೇಯ 79 ರನ್ ಗಳಿಸಿ ನ್ಯೂಜಿಲೆಂಡ್'ನ ಮಾನ ಉಳಿಸಿದರು. ಟಿಮ್ ಸೌಥೀ ಕೂಡ ಅರ್ಧಶತಕ ದಾಖಲಿಸಿ ಲಾಥಮ್ ಜೊತೆ ಒಳ್ಳೆಯ ಜೊತೆಯಾಟದಲ್ಲಿ ಭಾಗಿಯಾದರು.

ನಿಸ್ತೇಜವಾಗಿದ್ದ ವಿಕೆಟ್'ನಲ್ಲಿ ಭಾರತದ ಬೌಲರ್'ಗಳು ಚಾಕಚಕ್ಯತೆಯ ಪ್ರದರ್ಶನ ನೀಡಿದರು. ಉಮೇಶ್ ಯಾದವ್, ಹಾರ್ದಿಕ್ ಪಾಂಡ್ ಮತ್ತು ಜಸ್'ಪ್ರೀತ್ ಬುಮ್ರಾ ಉತ್ತಮ ಲೈನ್ ಅಂಡ್ ಲೆಂತ್ ಮೂಲಕ ಎದುರಾಳಿ ಬ್ಯಾಟುಗಾರರನ್ನು ಕಾಡಿದರು. ಈ ಪಂದ್ಯದ ಮೂಲಕ ಏಕದಿನ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಹಾರ್ದಿಕ್ ಪಾಂಡ್ಯ ತಮ್ಮ ಕರಾರುವಾಕ್ ದಾಳಿ ಮೂಲಕ ಕಿವೀಸ್ ಬ್ಯಾಟುಗಾರರ ಕಂಗೆಡಿಸಿದರು. ಮೂರು ಪ್ರಮುಖ ವಿಕೆಟ್'ಗಳನ್ನು ಕಬಳಿಸಿ ಕಿವೀಸ್ ಕುಸಿತಕ್ಕೆ ಕಾರಣರಾದರು. ಸ್ಪಿನ್ನರ್ ಅಮಿತ್ ಮಿಶ್ರಾ ಕಿವೀಸ್ ಪಡೆಯ ಬಾಲಂಗೋಚಿಗಳನ್ನು ಉರುಳಿಸಿದರು.

ಇನ್ನು ಗೆಲ್ಲಲು ಸಾಧಾರಣ ಮೊತ್ತದ ಗುರಿ ಪಡೆದ ಭಾರತ ನಿರೀಕ್ಷೆಯಂತೆ ಹೆಚ್ಚಿನ ಶ್ರಮವಿಲ್ಲದೇ ಗೆಲುವಿನ ದಡ ಮುಟ್ಟಿತು. ವಿರಾಟ್ ಕೊಹ್ಲಿ ಅಜೇಯ 85 ರನ್ ಗಳಿಸಿ ತಂಡದ ಹಾದಿಯನ್ನು ಸುಗಮಗೊಳಿಸಿದರು. ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಕಬಳಿಸಿ ಅಚ್ಚರಿ ಹುಟ್ಟಿಸಿದ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0ಯಿಂದ ವೈಟ್'ವಾಶ್ ಮಾಡಿದ್ದ ಭಾರತ ಇದೀಗ 5 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆರಂಭಿಕ ಮುನ್ನಡೆ ಪಡೆದುಕೊಂಡಿದೆ. ಸರಣಿಯ ಎರಡನೇ ಪಂದ್ಯ ಅಕ್ಟೋಬರ್ 20ರಂದು ದಿಲ್ಲಿಯಲ್ಲಿ ನಡೆಯಲಿದೆ.

ಸ್ಕೋರು ವಿವರ:

ನ್ಯೂಜಿಲೆಂಡ್ 43.5 ಓವರ್ 190 ರನ್ ಆಲೌಟ್
(ಟಾಮ್ ಲಾಥಮ್ ಅಜೇಯ 79, ಟಿಮ್ ಸೌಥೀ 55 ರನ್ - ಹಾರ್ದಿಕ್ ಪಾಂಡ್ಯ 31/3, ಅಮಿತ್ ಮಿಶ್ರಾ 49/3, ಉಮೇಶ್ ಯಾದವ್ 31/2)

ಭಾರತ 33.1 ಓವರ್ 194/4
(ವಿರಾಟ್ ಕೊಹ್ಲಿ ಅಜೇಯ 85, ಅಜಿಂಕ್ಯ ರಹಾನೆ 33, ಎಂ.ಎಸ್.ಧೋನಿ 21 ರನ್)