ಕ್ರೀಸ್'ನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ನಾಯಕ ವಿಲಿಯಮ್ಸನ್ ಕೂಡಾ ಶಮಿ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ನಂತರ ನಿರಂತರ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿದ ಕಿವೀಸ್ ಪಡೆ  126 ರನ್ ಗಳಿಸುವಷ್ಟರಲ್ಲಿ ನ್ಯೂಜಿಲೆಂಡ್ ಪ್ರಮುಖ 7 ವಿಕೆಟ್ ಕಳೆದುಕೊಂಡಿತು.

ಲಂಡನ್(ಮೇ.28): ಟೀಂ ಇಂಡಿಯಾದ ವೇಗದ ದಾಳಿಕಾರರಾದ ಮೊಹಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಕರಾರುವಕ್ಕಾದ ಬೌಲಿಂಗ್ ದಾಳಿ, ನಾಯಕ ವಿರಾಟ್ ಕೊಹ್ಲಿಯ ಆಕರ್ಷಕ ಅರ್ಧಶತಕದ ನೆರವಿನಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನ್ಯೂಜಿಲೆಂಡ್ ಎದುರಿನ ಅಭ್ಯಾಸ ಪಂದ್ಯದಲ್ಲಿ ಭಾರತ, ಡಕ್ವರ್ತ್ ಲೂಯಿಸ್ ಅನ್ವಯ 45 ರನ್‌'ಗಳ ಗೆಲುವು ಸಾಧಿಸಿದೆ.

ನ್ಯೂಜಿಲೆಂಡ್ ನೀಡಿದ್ದ 190 ರನ್‌'ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ, 26 ಓವರ್‌'ಗಳಲ್ಲಿ ೩ ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತ್ತು. ಆ ವೇಳೆ ಮಳೆ ಆರಂಭವಾದ ಕಾರಣ ಪಂದ್ಯವನ್ನು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಳಿಸಲಾಗಿತ್ತು. ಆದರೆ ನಿರಂತರವಾಗಿ ಮಳೆ ಸುರಿದಿದ್ದರಿಂದ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಜಿಂಕ್ಯ ರಹಾನೆ ಕೇವಲ 9 ರನ್ ಗಳಿಸಿ ಔಟಾದರು. ಆದರೆ 2ನೇ ವಿಕೆಟ್‌'ಗೆ ಶಿಖರ್ ಧವನ್ ಹಾಗೂ ವಿರಾಟ್ 68 ರನ್ ಜೊತೆಯಾಟವಾಡಿದರು. ಮಳೆಯಿಂದ ಆಟ ಸ್ಥಗಿತಗೊಂಡಾಗ ಕೊಹ್ಲಿ ಅಜೇಯ 52 ರನ್ ಗಳಿಸಿದ್ದರೆ, ಧೋನಿ 17 ರನ್ ಗಳಿಸಿ ಔಟಾಗದೇ ಉಳಿದಿದ್ದರು.

ಇದಕ್ಕೂ ಮುನ್ನ ಶಮಿ ಹಾಗೂ ಭುವನೇಶ್ವರ್, ಕಿವೀಸ್ ಬ್ಯಾಟ್ಸ್‌'ಮನ್‌'ಗಳನ್ನು ಕಾಡಿದರು. ತಂಡದ ಮೊತ್ತ 20ರನ್'ಗಳಿದ್ದಾಗ ಶಮಿ ಮೊದಲ ಆಘಾತ ನೀಡಿದರು. ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಕೇವಲ 9ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇದಾದ ನಂತರ 40ರನ್'ಗಳ ಜತೆಯಾಟವಾಡಿದ ಲ್ಯೂಕ್ ರೋಂಚಿ ಹಾಗೂ ಕೇನ್ ವಿಲಿಯಮ್ಸನ್ ಜೋಡಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡ್ಯೂಯುವ ಪ್ರಯತ್ನ ನಡೆಸಿದರು. ಕ್ರೀಸ್'ನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ನಾಯಕ ವಿಲಿಯಮ್ಸನ್ ಕೂಡಾ ಶಮಿ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ನಂತರ ನಿರಂತರ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿದ ಕಿವೀಸ್ ಪಡೆ 126 ರನ್ ಗಳಿಸುವಷ್ಟರಲ್ಲಿ ನ್ಯೂಜಿಲೆಂಡ್ ಪ್ರಮುಖ 7 ವಿಕೆಟ್ ಕಳೆದುಕೊಂಡಿತು. ಆರಂಭಿಕ ಲ್ಯೂಕ್ ರೊಂಚಿ 66 ರನ್ ಗಳಿಸಿ ಹೋರಾಡಿದರೆ ಕೊನೆಯಲ್ಲಿ ಜೇಮ್ಸ್ ನೀಶಮ್ 46 ಬ ರನ್ ಬಾರಿಸಿ ತಂಡ ಮೊತ್ತವನ್ನು ಇನ್ನೂರರ ಸಮೀಪಕ್ಕೆ ತಲುಪಿಸುವಲ್ಲಿ ನೆರವಾದರು.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್ : 189/10(38.4 ಓವರ್)

(ರೊಂಚಿ 66, ನೀಶಮ್ 46, ಭುವನೇಶ್ವರ್ 28/3)

ಭಾರತ : 129/3

(ಕೊಹ್ಲಿ 52*, ಧವನ್ 40, ನೀಶಮ್ 11/1)

ಫಲಿತಾಂಶ: ಡಿಎಲ್ ನಿಯಮದನ್ವಯ ಭಾರತಕ್ಕೆ 45ರನ್'ಗಳ ಗೆಲುವು