ಪಶ್ಚಿಮ ಏಷ್ಯಾ ಫುಟ್ಬಾಲ್ ಅಂಡರ್ -16 ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿಗೆ ಬಲಿಷ್ಠ ಇರಾಕ್ ವಿರುದ್ಧ ಗೆಲುವಿನ ಸಿಹಿ ಕಂಡಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ..
ಜೋರ್ಡನ್(ಆ.07): ಪಶ್ಚಿಮ ಏಷ್ಯಾ ಫುಟ್ಬಾಲ್ ಫೆಡರೇಷನ್ ಚಾಂಪಿಯನ್‌ಶಿಪ್ (ವಾಫ್) ಅಂಡರ್-16 ಟೂರ್ನಿ ಯಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಇರಾಕ್ ವಿರುದ್ಧ 1-0 ಗೋಲಿನ ಜಯ ಸಾಧಿಸಿದೆ. ನಿಗದಿತ 90 ನಿಮಿಷಗಳ ಆಟದ ಬಳಿಕ ಸಿಕ್ಕ ಹೆಚ್ಚುವರಿ ಸಮಯದಲ್ಲಿ ಭುವನೇಶ್ ಬಾರಿಸಿದ ಗೋಲಿನ ನೆರವಿನಿಂದ ಭಾರತ ಗೆಲುವು ಪಡೆಯಿತು.
ಯಾವುದೇ ವಯೋಮಿತಿಯಲ್ಲಿ ಇರಾಕ್ ವಿರುದ್ಧ ಭಾರತ ತಂಡಕ್ಕಿದು ಮೊದಲ ಜಯ ಎನ್ನುವುದು ವಿಶೇಷ. ಮುಂದಿನ ತಿಂಗಳು ಮಲೇಷ್ಯಾದಲ್ಲಿ ನಡೆಯಲಿರುವ ಎಎಫ್‌ಸಿ ಕಪ್‌ಗೂ ಮುನ್ನ ಸಾಧಿಸಿರುವ ಈ ಗೆಲುವು, ತಂಡದ ಆತ್ಮವಿಶ್ವಾಸ ವೃದ್ಧಿಸಿದೆ. ಈ ಗೆಲುವನ್ನು ಎಲ್ಲಾ ಭಾರತೀಯ ಫುಟ್ಬಾಲ್ ಕೋಚ್‌ಗಳಿಗೆ ಅರ್ಪಿಸುತ್ತೇನೆ. ಅವರೆಲ್ಲರ ಮಾರ್ಗದರ್ಶನದಲ್ಲಿ ಫುಟ್ಬಾಲ್ ವೃತ್ತಿಬದುಕು ಆರಂಭಿಸಿದ ಹುಡುಗರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಭಾರತ ತಂಡದ ಪ್ರಧಾನ ಕೋಚ್ ಬಿಬಿಯಾನೋ ಫರ್ನಾಂಡಿಸ್ ಹೇಳಿದ್ದಾರೆ.
ನೇಪಾಳದಲ್ಲಿ ನಡೆದ ಎಎಫ್‌ಸಿ ಕಪ್ ಅರ್ಹತಾ ಸುತ್ತಿನಲ್ಲಿ ಭಾರತ-ಇರಾಕ್ ಮುಖಾಮುಖಿ ಯಾಗಿದ್ದವು. ಆ ಪಂದ್ಯ ಗೋಲು ರಹಿತ ಡ್ರಾಗೊಂಡಿತ್ತು. ‘ನೇಪಾಳದಲ್ಲಿ ನಡೆದ ಪಂದ್ಯದಲ್ಲಿ ಆಡಿದ ತಂಡದಲ್ಲಿದ್ದ ಕೆಲ ಆಟಗಾರರು ಈ ಪಂದ್ಯದಲ್ಲಿ ಆಡಲಿಲ್ಲ. ಆದರೂ ಇರಾಕ್ ಎಂದಿಗೂ ಬಲಿಷ್ಠ ತಂಡ. ಈ ಗೆಲುವು ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರೋಚಕ ಫಲಿತಾಂಶಗಳನ್ನು ನಿರೀಕ್ಷೆ ಮಾಡಬಹುದು’ ಎಂದು ಫರ್ನಾಂಡಿಸ್ ಹೇಳಿದ್ದಾರೆ
