- Home
- Sports
- Cricket
- ಭಾರತಕ್ಕೆ ತವರಿನಲ್ಲಿ ಆಡುವ ಒತ್ತಡವಿದೆ, ಈ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ: ಅಚ್ಚರಿ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್!
ಭಾರತಕ್ಕೆ ತವರಿನಲ್ಲಿ ಆಡುವ ಒತ್ತಡವಿದೆ, ಈ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ: ಅಚ್ಚರಿ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್!
ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಹೀಗಿರುವಾಗಲೇ ಈ ಬಾರಿ ಯಾವ ತಂಡ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಲಿದೆ. ಯಾವ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎನ್ನುವ ಚರ್ಚೆ ಜೋರಾಗಿದೆ. ಹೀಗಿರುವಾಗ ಎಬಿ ಡಿವಿಲಿಯರ್ಸ್ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಭಾರತಕ್ಕಿಂದು ಯುಎಸ್‌ಎ ಸವಾಲು
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಇಂದಿನಿಂದ ಅಧಿಕೃತವಾಗಿ ಆರಂಭವಾಗಿದ್ದು, ಪ್ರತಿಷ್ಠಿತ ಚಾಂಪಿಯನ್ ಪಟ್ಟಕ್ಕಾಗಿ 20 ತಂಡಗಳು ಕಾದಾಡುತ್ತಿವೆ. ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಭಾರತ ತಂಡವು ಇಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ಯುಎಸ್‌ಎ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಸಮಿಫೈನಲಿಸ್ಟ್ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್
ಇದೀಗ ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಾವೆಲ್ಲಾ 4 ತಂಡಗಳು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎನ್ನುವ ಚರ್ಚೆ ಜೋರಾಗಿದೆ. ಈ ಕುರಿತಂತೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ, ಆರ್‌ಸಿಬಿ ಆಪತ್ಬಾಂದವ, ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭವಿಷ್ಯ ನುಡಿದಿದ್ದಾರೆ.
ಆಸೀಸ್ ಕೈಬಿಟ್ಟು ಈ 4 ತಂಡಗಳು ಸೆಮೀಸ್‌ಗೇರಲಿವೆ ಎಂದ ಎಬಿಡಿ
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ. ಆದರೆ 2021ರ ಚಾಂಪಿಯನ್ ಬಲಿಷ್ಠ ಆಸ್ಟ್ರೇಲಿಯಾ ತಂಡವು ಅಂತಿಮ ನಾಲ್ಕರಘಟ್ಟ ಪ್ರವೇಶಿಸುವುದಿಲ್ಲ ಎಂದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಭಾರತ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರ ದಂಡೇ ಇದೆ
ಸದ್ಯಕ್ಕೆ ಟೀಂ ಇಂಡಿಯಾದಲ್ಲಿರುವ ಪ್ರತಿಭಾನ್ವಿತ ಆಟಗಾರರನ್ನು ಗಮನಿಸಿದರೇ, ಅವರನ್ನು ತಡೆಯುವವರೇ ಇಲ್ಲ ಎನಿಸುತ್ತಿದೆ. ಎಷ್ಟು ತಂಡಗಳಿಗೆ ಭಾರತವನ್ನು ಸೋಲಿಸಲು ಸಾಧ್ಯವಾಗುತ್ತೋ ನನಗಂತೂ ಗೊತ್ತಾಗುತ್ತಿಲ್ಲ. ಆರು ರನ್‌ಗೆ ಎರಡು ವಿಕೆಟ್ ಕಳೆದುಕೊಂಡರೂ ಮೈಚಳಿ ಬಿಟ್ಟು ರನ್ ಗಳಿಸುವ ಕ್ಷಮತೆ ಭಾರತ ತಂಡಕ್ಕಿದೆ ಎಂದು ಎಬಿಡಿ ಅಭಿಪ್ರಾಯ ಪಟ್ಟಿದ್ದಾರೆ.
ಭಾರತಕ್ಕೆ ತವರಿನಲ್ಲಿ ಆಡುವುದರ ಒತ್ತಡವಿದೆ
ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಆದರೆ ಇದೇ ಭಾರತ ತಂಡಕ್ಕೆ ಮುಳ್ಳಾಗುವ ಸಾಧ್ಯತೆಯಿದೆ ಎಂದು ಎಬಿ ಡಿವಿಲಿಯರ್ಸ್ ಎಚ್ಚರಿಸಿದ್ದಾರೆ. ಯಾಕೆಂದರೆ ತವರಿನಲ್ಲಿ ಆಡುತ್ತಿರುವುದರಿಂದ ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಹಾಗೂ ಒತ್ತಡಗಳಿರುತ್ತವೆ. ಅವರು ಕಪ್ ಗೆಲ್ಲುವ ಫೇವರೇಟ್ ತಂಡವಾಗಿದ್ದರೂ ವಿಶ್ವಕಪ್‌ನಲ್ಲಿ ಹಲವು ಸರ್ಪ್ರೈಸ್‌ಗಳು ಕಾದಿರುತ್ತವೆ ಎಂದು ಹೇಳಿದ್ದಾರೆ.
ತಂಡ ಒಗ್ಗಟ್ಟಾಗಿದ್ದರೇ ಮಾತ್ರ ಗೆಲುವು ಸಾಧ್ಯವೆಂದ ಎಬಿಡಿ
ಒತ್ತಡದ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರು ಜತೆಯಾಗಿ ನಿಲ್ಲಬೇಕು. ವೈಯುಕ್ತಿಕ ರೆಕಾರ್ಡ್ ಬದಿಗಿಟ್ಟು ತಂಡದ ಗೆಲುವಿಗೆ ಆಡಬೇಕು. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡವು ಹಾಗೆ ಆಡುತ್ತಿತ್ತು. ಅಲ್ಲಿ ಯಾವ ಆಟಗಾರರನು ನಾನು ಸಪರೇಟ್ ಎಂದು ಭಾವಿಸುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿ ತಂಡದ ಗೆಲುವಿಗೆ ಶ್ರಮಿಸುತ್ತಿದ್ದರು ಎಂದು ಎಬಿಡಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

