ಬೆಂಗಳೂರು(ಸೆ.26): 10ನೇ ಏಷ್ಯನ್‌ ವಯೋ ವರ್ಗ ಈಜು ಚಾಂಪಿಯನ್‌ಶಿಪ್‌ನ 2ನೇ ದಿನವೂ ಭಾರತದ ಪದಕದ ಭೇಟೆ ಮುಂದುವರೆದಿದೆ. ಭಾರತದ ಸ್ಪರ್ಧಿಗಳು 2ನೇ ದಿನವಾದ ಬುಧವಾರ 2 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನೊಂದಿಗೆ 10 ಪದಕ ಗೆದ್ದರು. ಮೊದಲ ದಿನ ಗೆದ್ದಿದ್ದ 18 ಪದಕ ಸೇರಿ ಒಟ್ಟು 28 ಪದಕ ಜಯಿ​ಸಿ​ರುವ ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡಿದೆ. 39 ಪದಕಗಳೊಂದಿಗೆ ಜಪಾನ್‌ ಅಗ್ರಸ್ಥಾನದಲ್ಲಿದೆ.

ಏಷ್ಯನ್‌ ಈಜು ಕೂಟ: ಮೊದಲ ದಿನವೇ ಭಾರತ ಭರ್ಜರಿ ಪದಕ ಭೇಟೆ

ಪುರುಷರ 50 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಭಾರತದ ತಾರಾ ಈಜುಪಟು ವೀರ್‌ಧವಳ್‌ ಖಾಡೆ 22.59 ಸೆ.ಗಳಲ್ಲಿ ಗುರಿ ತಲುಪಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. 1500 ಮೀ. ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್‌ 15 ನಿಮಿಷ 41.54 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಪುರುಷರ 100 ಮೀ. ಬಟರ್‌ಫ್ಲೈನಲ್ಲಿ ಸಾಜನ್‌ ಪ್ರಕಾಶ್‌ 54.42 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರೆ, 400 ಮೀ. ಮೆಡ್ಲೆಯಲ್ಲಿ ಎಸ್‌. ಶಿವ 4 ನಿಮಿಷ 32.11 ಸೆ.ಗಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆ​ದರು. 50 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಲಿಖಿತ್‌ ಕಂಚಿನ ಪದಕ ಗಳಿ​ಸಿ​ದರು. 

ಮಹಿಳೆಯರ 1500 ಮೀ. ಫ್ರೀಸ್ಟೈಲ್‌ನಲ್ಲಿ ಶಿವಾನಿ ಕಟಾರಿಯ 17 ನಿಮಿಷ 58.16 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಮಿಶ್ರ 4/100 ಮೀ. ಫ್ರೀ ಸ್ಟೈಲ್‌ನಲ್ಲಿ ಶ್ರೀಹರಿ, ವೀರ್‌ಧವಳ್‌, ಮಾನಾ ಪಟೇಲ್‌, ಶಿವಾನಿ ಅವರಿದ್ದ ತಂಡ 3 ನಿಮಿಷ 42.56 ಸೆ.ಗಳಲ್ಲಿ ಗುರಿ ಮುಟ್ಟಿಕಂಚು ಗೆದ್ದಿತು. ಅಂಡರ್‌ 12-14 ಬಾಲಕರ 400 ಮೀ. ಫ್ರೀಸ್ಟೈಲ್‌ನಲ್ಲಿ ಗಂಗೂಲಿ ಶೋನ್‌ 4 ನಿಮಿಷ 07.21 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು. 200 ಮೀ. ಬಟರ್‌ಫ್ಲೈನಲ್ಲಿ ಉತ್ಕರ್ಷ್ ಪಟೇಲ್‌ 2 ನಿಮಿಷ 09.82 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು. ಅಂಡರ್‌ 15-17 ಬಾಲಕರ 100 ಮೀ. ಬಟರ್‌ಫ್ಲೈನಲ್ಲಿ ಮ್ಯಾಥ್ಯೂ ತನೀಶ್‌ ಜಾರ್ಜ್ 55.98 ಸೆ.ಗಳಲ್ಲಿ ಗುರಿ ಮುಟ್ಟಿಬೆಳ್ಳಿ ಜಯಿಸಿದರು.