ಏಷ್ಯನ್‌ ಈಜು ಕೂಟ: ಮೊದಲ ದಿನವೇ ಭಾರತ ಭರ್ಜರಿ ಪದಕ ಭೇಟೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಏಷ್ಯನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಭರ್ಜರಿ ಪದಕದ ಭೇಟೆಯಾಡಿದೆ. ಮೊದಲ ದಿನವೇ ಭಾರತ 18 ಪದಕಗಳನ್ನು ಬಾಚಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

India bags eighteen medals on first day of Asian Swimming Championship 2019

ಬೆಂಗಳೂರು[ಸೆ.25]: 10ನೇ ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ. ಕೂಟದ ಮೊದಲ ದಿನವಾದ ಮಂಗಳವಾರ ಭಾರತೀಯ ಈಜುಪಟುಗಳು 6 ಚಿನ್ನ, 6 ಬೆಳ್ಳಿ ಹಾಗೂ 6 ಕಂಚಿನ ಪದಕಗಳೊಂದಿಗೆ ಒಟ್ಟು 18 ಪದಕ ಜಯಿಸಿದರು. ಪದಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಪಡೆದಿದ್ದು, 10 ಚಿನ್ನದೊಂದಿಗೆ ಒಟ್ಟು 20 ಪದಕ ಗೆದ್ದ ಜಪಾನ್ ಅಗ್ರಸ್ಥಾನದಲ್ಲಿದೆ.

ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೇಂದ್ರ ಬಾತ್ರಾ, ಇಲ್ಲಿನ ದ್ರಾವಿಡ್-ಪಡುಕೋಣೆ ಕೇಂದ್ರದಲ್ಲಿ ಚಾಂಪಿಯನ್‌ಶಿಪ್ ಉದ್ಘಾಟಿಸಿದರು. ಮೊದಲ ದಿನ ನಡೆದ ಈಜು ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಭಾರತೀಯರು ಮಿಂಚಿದರು. ಪುರುಷರ ಮುಕ್ತ ವಿಭಾಗದ 200 ಮೀ. ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಕುಶಾಗ್ರ ರಾವತ್ ಚಿನ್ನ ಗೆಲ್ಲುವ ಮೂಲಕ, ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ದೊರಕಿಸಿಕೊಟ್ಟರು. ರಾವತ್ 1:52:30 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ಪಡೆದರೆ, ಆನಂದ್ ಅನಿಲ್ ಕುಮಾರ್ 1:54:19 ಸೆಕೆಂಡ್‌ಗಳಲ್ಲಿ ತಲುಪಿ ಕಂಚಿನ ಪದಕ ಜಯಿಸಿದರು. 800 ಮೀ. ಫ್ರೀ ಸ್ಟೈಲ್‌ನಲ್ಲೂ ರಾವತ್ ಚಿನ್ನಕ್ಕೆ ಮುತ್ತಿಟ್ಟರು. 8:10:05 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ರಾವತ್ ಮೊದಲ ಸ್ಥಾನ ಪಡೆದರು.

ಇಂದಿ​ನಿಂದ ಬೆಂಗಳೂ​ರಲ್ಲಿ ಏಷ್ಯನ್‌ ಈಜು ಕೂಟ

ಭಾರತದ ಬ್ಯಾಕ್ ಸ್ಟ್ರೋಕ್ ಕಿಂಗ್ ಎಂದೇ ಕರೆಸಿಕೊಳ್ಳುವ ಕರ್ನಾಟಕದ ಶ್ರೀಹರಿ ನಟರಾಜ್ ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 25.30 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿದರು.
ಮಹಿಳೆಯರ 50 ಮೀ. ಸ್ಪರ್ಧೆಯಲ್ಲಿ ಮಾನಾ ಪಟೇಲ್ 29:92 ಸೆಕೆಂಡ್‌ಗಳಲ್ಲಿ ತಲುಪಿ ಸ್ವರ್ಣಕ್ಕೆ ಮುತ್ತಿಟ್ಟರು. ಅನುಭವಿ ಈಜುಪಟು ಸಾಜನ್ ಪ್ರಕಾಶ್ 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಬೆಳ್ಳಿ ಗೆದ್ದರೆ, ರಾಜ್ಯದ ಲಿಖಿತ್ ಸೆಲ್ವರಾಜ್ 100 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಕಂಚು ಜಯಿಸಿದರು. ಮಹಿಳೆಯರ 200 ಮೀ. ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಶಿವಾನಿ ಕಟಾರಿಯಾ ಬೆಳ್ಳಿ ಗೆದ್ದರು. 15ರಿಂದ 17 ವರ್ಷಗಳ ವಿಭಾಗ, 12ರಿಂದ 14 ವರ್ಷಗಳ ವಿಭಾಗದಲ್ಲೂ ಭಾರತೀಯರು ಪದಕ ಜಯಿಸಿದರು. ಬಾಲಕಿಯರ ಗುಂಪು 1 ವಿಭಾಗದ 50 ಮೀ. ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ರಾಜ್ಯದ ಸುವನಾ ಭಾಸ್ಕರ್ ಕಂಚು ಗಳಿಸಿದರು. 

ಏಷ್ಯಾಕಪ್ ಬಾಸ್ಕೆಟ್‌ಬಾಲ್: ಭಾರತಕ್ಕೆ ಹೀನಾಯ ಸೋಲು

ರಿಲೇಯಲ್ಲೂ ಭಾರತ ಜಯಭೇರಿ

ದಿನದ ಆರಂಭದಲ್ಲೇ ಭಾರತ ಪುರುಷರ ರಿಲೇ ತಂಡ ಚಿನ್ನ ಜಯಿಸಿತು. 4*100 ಮೀ. ರಿಲೇಯಲ್ಲಿ ಶ್ರೀಹರಿ ನಟರಾಜ್, ಆನಂದ್, ಸಾಜನ್ ಪ್ರಕಾಶ್ ಹಾಗೂ ವೀರ್‌ಧವಳ್ ಖಾಡೆ ಅವರನ್ನೊಳಗೊಂಡ ಭಾರತ ತಂಡ ಚಿನ್ನ ಜಯಿಸಿತು. 3.23.72 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಭಾರತ, 2ನೇ ಸ್ಥಾನ ಪಡೆದ ಇರಾನ್ ಜತೆ 5 ಸೆಕೆಂಡ್ ಅಂತರ ಕಾಯ್ದುಕೊಂಡಿತು. ಮಹಿಳೆಯರ 4*100 ಮೀ. ರಿಲೇಯಲ್ಲಿ ಭಾರತ ತಂಡ ಬೆಳ್ಳಿ ಜಯಿಸಿತು.
 

Latest Videos
Follow Us:
Download App:
  • android
  • ios