ದಿನಾಂತ್ಯದಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಸುಭದ್ರವಾಗಿದೆ.

ರಾಂಚಿ(ಮಾ. 17): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಕ್ರಿಕೆಟ್ ಟೆಸ್ಟ್ ಪಂದ್ಯ ನಿಕಟ ಪೈಪೋಟಿ ಕಾಣುತ್ತಿದೆ. ಮೊದಲ ದಿನದಂದು ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದರೆ, ಎರಡನೇ ದಿನ ಭಾರತಕ್ಕೆ ಶುಭ ತಂದಿದೆ. ನಿನ್ನೆ 4 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿದ್ದ ಕಾಂಗರೂಗಳ ಪಡೆ ಇಂದು 451 ರನ್'ಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ ದಿನಾಂತ್ಯದಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಸುಭದ್ರವಾಗಿದೆ.

ದೊಡ್ಡ ಮೊತ್ತ ಪೇರಿಸುವ ಸನ್ನಾಹದಲ್ಲಿ ಆಸ್ಟ್ರೇಲಿಯಾ ಇಂದಿನ ದಿನದಾಟ ಆರಂಭಿಸಿತು. ಆದರೆ, ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್'ವೆಲ್ ಅವರ ಅಮೋಘ ಜೊತೆಯಾಟದ ಓಟ ಇಂದು ಹೆಚ್ಚು ಹೊತ್ತು ಸಾಗಲಿಲ್ಲ. ಇಂದು ಈ ಜೋಡಿ ಗಳಿಸಿದ ರನ್ನು ಕೇವಲ 33 ಮಾತ್ರ. ಒಟ್ಟಾರೆ ಈ ಜೋಡಿ 5ನೇ ವಿಕೆಟ್'ಗೆ 191 ರನ್ ಬೃಹತ್ ಜೊತೆಯಾಟ ಆಡಿ ತಂಡಕ್ಕೆ ಬುನಾದಿ ಹಾಕಿಕೊಟ್ಟರು. ಅದಾದ ಬಳಿಕ ನಾಯಕ ಸ್ಟೀವ್ ಸ್ಮಿತ್'ಗೆ ಉತ್ತಮ ಸಾಥ್ ನೀಡಿದ್ದು ಮ್ಯಾಥ್ಯೂ ವೇಡ್ ಮತ್ತು ಸ್ಟೀವ್ ಓಕೀಫೆ. ಸ್ಮಿತ್ ಮತ್ತು ವೇಡ್ 6ನೇ ವಿಕೆಟ್'ಗೆ 64 ರನ್ ಸೇರಿಸಿದರು. ಸ್ಮಿತ್ ಮತ್ತು ಕೀಫೆ 8ನೇ ವಿಕೆಟ್'ಗೆ 51 ರನ್ ಜೊತೆಯಾಟ ನೀಡಿದರು. ಇದರಿಂದಾಗಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಸ್ಕೋರು 451 ರನ್ ಮುಟ್ಟಲು ಸಾಧ್ಯವಾಯಿತು. ನಾಯಕ ಸ್ಟೀವ್ ಸ್ಮಿತ್ ಅಜೇಯ 178 ರನ್ ಗಳಿಸಿದರು.

ಇನ್ನು, ಭಾರತೀಯ ಬೌಲರ್'ಗಳ ಪೈಕಿ ರವೀಂದ್ರ ಜಡೇಜಾ ಅತ್ಯಂತ ಪರಿಣಾಮಕಾರಿ ಎನಿಸಿದರು. 124 ರನ್ನಿತ್ತು 5 ವಿಕೆಟ್ ಕಬಳಿಸಿದ ಜಡೇಜಾ ಎದುರಾಳಿ ಇನ್ನಿಂಗ್ಸ್'ನ ಬೆನ್ನೆಲುಬು ಮುರಿಯಲು ಯಶಸ್ವಿಯಾದರು. ಅಲ್ಲದೇ, ಅವರ ಅದ್ಭುತ ಕೈಚಳಕದಿಂದ ಒಂದು ರನ್ನೌಟ್ ಕೂಡ ಸಾಧ್ಯವಾಯಿತು.

ಇದಾದ ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಮೊದಮೊದಲು ರನ್ ಗಳಿಸಲು ಪರದಾಡಿತು. ಆದರೆ, ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್ ನಿಧಾನವಾಗಿ ಆಟಕ್ಕೆ ಕುದುರಿಕೊಂಡರೂ ಒಳ್ಳೆಯ ಓಪನಿಂಗ್ ಕೊಟ್ಟರು. ರಾಹುಲ್ ಅವರಂತೂ ಆತ್ಮವಿಶ್ವಾಸಪೂರ್ವಕ ಬ್ಯಾಟಿಂಗ್'ನಿಂದ ಗಮನ ಸೆಳೆದರು. ಇವರಿಬ್ಬರ 91 ರನ್ ಜೊತೆಯಾಟದಲ್ಲಿ ರಾಹುಲ್ ಪಾಲು 67 ರನ್. ರಾಹುಲ್ ನಿರ್ಗಮನದ ಬಳಿಕ ಮುರಳಿ ವಿಜಯ್ ಮತ್ತು ಚೇತೇಶ್ವರ್ ಪೂಜಾರ ಮತ್ಯಾವುದೇ ಅವಘಡಕ್ಕೆ ಆಸ್ಪದ ಕೊಡದೆ ದಿನದಾಟ ಮುಗಿಸಿದರು.

ಸ್ಕೋರು ವಿವರ(2ನೇ ದಿನದಂತ್ಯಕ್ಕೆ):

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 137.3 ಓವರ್ 451 ರನ್ ಆಲೌಟ್
(ಸ್ಟೀವ್ ಸ್ಮಿತ್ ಅಜೇಯ 178, ಗ್ಲೆನ್ ಮ್ಯಾಕ್ಸ್'ವೆಲ್ 104, ಮ್ಯಾಟ್ ರೆನ್'ಶಾ 44, ಮ್ಯಾಥ್ಯೂ ವೇಡ್ 27, ಸ್ಟೀವ್ ಓಕೀಫೆ 25, ಪೀಟರ್ ಹ್ಯಾಂಡ್ಸ್'ಕೂಂಬ್ 19 ರನ್ - ರವೀಂದ್ರ ಜಡೇಜಾ 124/5, ಉಮೇಶ್ ಯಾದವ್ 106/3)

ಭಾರತ ಮೊದಲ ಇನ್ನಿಂಗ್ಸ್ 40 ಓವರ್ 120/1
(ಕೆಎಲ್ ರಾಹುಲ್ 67, ಮುರಳಿ ವಿಜಯ್ ಅಜೇಯ 42 ರನ್)