ಸದ್ಯದ ಮಟ್ಟಿಗೆ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬರೆನಿಸಿರುವ ಕೊಹ್ಲಿ, ಸ್ಥಿರ ಬ್ಯಾಟಿಂಗ್ ಪ್ರದರ್ಶನವನ್ನೇನಾದರೂ ಕಾಯ್ದುಕೊಂಡರೆ ಕಿವೀಸ್ ಹಿನ್ನಡೆ ಅನುಭವಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಕಿವೀಸ್ ಮೊದಲು ಕೊಹ್ಲಿಗೆ ತಡೆಹಾಕಲು ಕಾರ್ಯ‌್ಯತಂತ್ರ ಹೆಣೆದಿದೆ.
ರಾಂಚಿ(ಅ.25): ಮೊಹಾಲಿಯಲ್ಲಿನ ಭರ್ಜರಿ ಗೆಲುವಿನೊಂದಿಗೆ, ಕೋಟ್ಲಾ ಸೋಲನ್ನು ಮೆಟ್ಟಿನಿಂತು ಅತೀವ ಹುಮ್ಮಸ್ಸಿನಿಂದ ಕೂಡಿರುವ ಟೀಂ ಇಂಡಿಯಾ, ನಾಳೆ ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಆ ಮೂಲಕ ಐದು ಪಂದ್ಯ ಸರಣಿಯನ್ನು ಕೊನೆಯ ಪಂದ್ಯ ಬಾಕಿ ಇರುವಂತೆಯೇ ಕೈವಶಮಾಡಿಕೊಳ್ಳುವ ಗುರಿ ಹೊತ್ತಿದೆ.
ಕಳೆದ ಭಾನುವಾರ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಅಜೇಯ ಶತಕದಾಟವಲ್ಲದೆ, ನಾಯಕ ಧೋನಿಯ ಭರ್ಜರಿ ಅರ್ಧಶತಕವು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಏಳು ವಿಕೆಟ್ಗಳ ಅಮೋಘ ಗೆಲುವು ಸಾಧಿಸಿತ್ತು.
91 ಎಸೆತಗಳಲ್ಲಿ 80 ರನ್ ಗಳಿಸುವುದರೊಂದಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 9 ಸಹಸ್ರ ರನ್ ಪೂರೈಸಿದ್ದಲ್ಲದೆ, 50+ ಸರಾಸರಿಯಲ್ಲಿ ಈ ಸಾಧನೆ ಮಾಡಿದ ಮೊಟ್ಟಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಧೋನಿ ಭಾಜನರಾಗಿದ್ದರು.
ಮತ್ತೆ ಕೊಹ್ಲಿ ಮೋಡಿ?
ಈ ಮೈದಾನದಲ್ಲಿನ ತನ್ನ ಎರಡು ಅಭಿಯಾನದಲ್ಲಿ 77 ಮತ್ತು 139 ರನ್ಗಳೊಂದಿಗೆ ಅಜೇಯ ಆಟ ಪ್ರದರ್ಶಿಸಿರುವ ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಕೊಹ್ಲಿ ಮತ್ತೊಮ್ಮೆ ಇಂಥದ್ದೇ ಮನೋಜ್ಞ ಇನ್ನಿಂಗ್ಸ್ ಕಟ್ಟುವ ವಿಶ್ವಾಸದಲ್ಲಿದ್ದಾರೆ. ಸದ್ಯದ ಮಟ್ಟಿಗೆ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳ ಪೈಕಿ ಒಬ್ಬರೆನಿಸಿರುವ ಕೊಹ್ಲಿ, ಸ್ಥಿರ ಬ್ಯಾಟಿಂಗ್ ಪ್ರದರ್ಶನವನ್ನೇನಾದರೂ ಕಾಯ್ದುಕೊಂಡರೆ ಕಿವೀಸ್ ಹಿನ್ನಡೆ ಅನುಭವಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಕಿವೀಸ್ ಮೊದಲು ಕೊಹ್ಲಿಗೆ ತಡೆಹಾಕಲು ಕಾರ್ಯ್ಯತಂತ್ರ ಹೆಣೆದಿದೆ. ಕೇವಲ ಕೊಹ್ಲಿಯನ್ನಷ್ಟೇ ಅಲ್ಲದೆ ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್ ಮತ್ತು ನಾಯಕ ಧೋನಿ ಮೇಲೂ ಕಿವೀಸ್ ಕಣ್ಣಿಟ್ಟಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಈ ಎರಡರಲ್ಲಿಯೂ ಸಂಘಟನಾತ್ಮಕ ಪ್ರದರ್ಶನ ನೀಡುತ್ತಿರುವ ಭಾರತ ತಂಡವನ್ನು ಮಣಿಸಲು ಕಿವೀಸ್ ಕೂಡ ಅಷ್ಟೇ ದಿಟ್ಟ ಪ್ರತಿರೋಧ ತೋರಬೇಕಿದ್ದು, ಇದಾಗದ ಹೊರತು ಕಿವೀಸ್ ಏಕದಿನ ಸರಣಿಯನ್ನೂ ಕಳೆದುಕೊಳ್ಳುವುದು ಶತಃಸಿದ್ಧವಾಗಲಿದೆ.
ಕಿವೀಸ್ಗೆ ಅಗ್ನಿಪರೀಕ್ಷೆ
ಅಸ್ಥಿರ ಬ್ಯಾಟಿಂಗ್ನದ್ದೇ ಕೇನ್ ವಿಲಿಯಮ್ಸನ್ ಸಾರಥ್ಯದ ಕಿವೀಸ್ನ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹೀಗಾಗಿ ಈ ಪಂದ್ಯ ಅದರ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಿದ್ದು, ಅಗ್ನಿಪರೀಕ್ಷೆಯಾಗಿದೆ. ಅದರಲ್ಲೂ ಆರಂಭಿಕ ಮಾರ್ಟಿನ್ ಗುಪ್ಟಿಲ್ ಅಂತೂ ಟೆಸ್ಟ್ ಸರಣಿ ಮೊದಲುಗೊಂಡು ಏಕದಿನ ಸರಣಿಯ ಇಲ್ಲೀವರೆಗಿನ ಪಂದ್ಯಗಳಲ್ಲಿಯೂ ಅಸ್ಥಿರ ಬ್ಯಾಟಿಂಗ್ನಿಂದ ತಂಡದ ಸಂಕಷ್ಟವನ್ನು ಹೆಚ್ಚಿಸಿದ್ದಾರೆ. ಇನ್ನು ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ತಂಡ ಸರಣಿಯಲ್ಲಿ ಪುಟಿದೆದ್ದು ನಿಲ್ಲುವಂತೆ ಮಾಡಿದ್ದ ನಾಯಕ ಕೇನ್ ವಿಲಿಯಮ್ಸನ್ ಕಳೆದ ಪಂದ್ಯದಲ್ಲಿ ಕೇವಲ 22 ರನ್ಗಳಿಗೆ ನಿರುತ್ತರಾದರು. ಅಂತೆಯೇ ಅನುಭವಿ ಆಟಗಾರ ರಾಸ್ ಟೇಲರ್ ಕೂಡ ಸ್ಥಿರ ಪ್ರದರ್ಶನ ತೋರದೆ ಎಡವುತ್ತಿದ್ದಾರೆ. ಹೀಗಾಗಿ ಮೇಲಿನ ಕ್ರಮಾಂಕ ಸ್ಥಿರ ಪ್ರದರ್ಶನ ನೀಡಲೇಬೇಕಾದ ಒತ್ತಡಕ್ಕೆ ಒಳಗಾಗಿದೆ.
ಸಂಭವನೀಯರ ಪಟ್ಟಿ
ಭಾರತ
ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಮಹೇಂದ್ರ ಸಿಂಗ್ ಧೋನಿ (ನಾಯಕ), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ಅಮಿತ್ ಮಿಶ್ರಾ.
ನ್ಯೂಜಿಲೆಂಡ್
ಮಾರ್ಟಿನ್ ಗುಪ್ಟಿಲ್, ಟಾಮ್ ಲಾಥಮ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಕೊರೆ ಆ್ಯಂಡರ್ಸನ್, ಮ್ಯಾಟ್ ಹೆನ್ರಿ, ಲೂಕ್ ರೊಂಚಿ, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥೀ ಮತ್ತು ಟ್ರೆಂಟ್ ಬೌಲ್ಟ್
ಪಂದ್ಯ ಆರಂಭ: ಮಧ್ಯಾಹ್ನ 1.30 ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್
