ಕೋಲ್ಕತಾ[ಜು.24]: ಟೆಸ್ಟ್ ತಂಡಕ್ಕೆ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸೇರ್ಪಡೆಯಾಗಲಿ ಎಂಬ ಒತ್ತಡ ಒಂದೆಡೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಚಾಹಲ್ ಬಗ್ಗೆ ಒಲವು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆ.4ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ 4 ದಿನಗಳ ಪಂದ್ಯಕ್ಕೆ ಆಯ್ಕೆ ಮಾಡಿರುವ ಭಾರತ ‘ಎ’ ತಂಡದಲ್ಲಿ ಚಾಹಲ್‌ಗೆ ಅವಕಾಶ ಕಲ್ಪಿಸಲಾಗಿದೆ.

ದ.ಆಫ್ರಿಕಾ ತಂಡ ಭಾರತ ‘ಎ’ ವಿರುದ್ಧ 4 ದಿನಗಳ 2 ಪಂದ್ಯಗಳನ್ನಾಡಲಿದ್ದು, ಟೆಸ್ಟ್ ಮಾದರಿಗೆ ಸಿದ್ಧಗೊಳ್ಳಲು ಚಾಹಲ್‌ಗೆ ಇದೊಂದು ಉತ್ತಮ ವೇದಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಇಂಗ್ಲೆಂಡ್ ವಿರುದ್ಧದ ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಚಾಹಲ್ ಹಾಗೂ ಕುಲ್ದೀಪ್ ಜೋಡಿ ಉತ್ತಮ ಪ್ರದರ್ಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಚಾಹಲ್ ಬಗ್ಗೆ ವಿರಾಟ್ ಒಲವು ತೋರಿದ್ದರು. ಸದ್ಯ ಇಂಗ್ಲೆಂಡ್ ವಿರುದ್ಧದ ಮೊದಲ 3 ಟೆಸ್ಟ್‌ಗಳಿಗೆ ಭಾರತ ತಂಡವನ್ನು ಪ್ರಕಟಿಸಿದ್ದು, ಉಳಿದೆರಡು ಪಂದ್ಯಗಳಿಗೆ ಇನ್ನೂ ತಂಡ ಪ್ರಕಟಿಸಿಲ್ಲ. ಒಂದೊಮ್ಮೆ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ಸರಣಿಯಲ್ಲಿ ಚಾಹಲ್ ಉತ್ತಮ ಪ್ರದರ್ಶನ ನೀಡಿದರೆ ಚಾಹಲ್, ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.