ಪೃಥ್ವಿ ಶಾ ಆರಂಭದಿಂದಲೂ ಸ್ಫೋಟಕ ಇನ್ನಿಂಗ್ಸ್ ಕಟ್ಟುವ ಮೂಲಕ ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್ ನೆನಪಾಗುವಂತೆ ಬ್ಯಾಟಿಂಗ್ ನಡೆಸಿದರು. 99 ಎಸೆತಗಳಲ್ಲಿ ಶತಕ ಸಿಡಿಸಿ ಪದಾರ್ಪಣ ಪಂದ್ಯದಲ್ಲೇ ಅತಿವೇಗವಾಗಿ ಶತಕ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಭಾಜನರಾದ ಪೃಥ್ವಿ, 154 ಎಸೆತಗಳನ್ನು ಎದುರಿಸಿ 19 ಬೌಂಡರಿಗಳ ನೆರವಿನಿಂದ 134 ರನ್ ಚಚ್ಚಿದರು.

ರಾಜ್’ಕೋಟ್[ಅ.04]: ವೃತ್ತಿಜೀವನದ 19ನೇ ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಚೇತೇಶ್ವರ್ ಪೂಜಾರ 86 ರನ್ ಬಾರಿಸಿ ಶೆರ್ಮಾನ್ ಲೆವಿಸ್’ಗೆ ವಿಕೆಟ್ ಒಪ್ಪಿಸಿದ್ದಾರೆ. ಇದು ಲೆವಿಸ್ ಅವರ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್’ನ ಚೊಚ್ಚಲ ವಿಕೆಟ್ ಆಗಿದೆ.

Scroll to load tweet…
Scroll to load tweet…

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್’ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಭಾರತ ಆರಂಭದಲ್ಲೇ ರಾಹುಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಜತೆಯಾದ ಯುವ ಪ್ರತಿಭೆ ಪೃಥ್ವಿ ಶಾ-ಚೇತೇಶ್ವರ್ ಪೂಜಾರ ಜೋಡಿ ಎರಡನೇ ವಿಕೆಟ್’ಗೆ 206ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇದು ತವರಿನಲ್ಲಿ ಎರಡನೇ ವಿಕೆಟ್’ಗೆ ವೆಸ್ಟ್ ಇಂಡೀಸ್ ಎದುರು ಭಾರತೀಯ ಬ್ಯಾಟ್ಸ್’ಮನ್’ಗಳು ಬಾರಿಸಿದ ಗರಿಷ್ಠ ರನ್’ಗಳ ಜತೆಯಾಟವಾಗಿದೆ. 

ಇಂದು ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಭರ್ಜರಿ ಶತಕ ಸಿಡಿಸಿ ಸ್ಮರಣೀಯವಾಗಿಸಿಕೊಂಡರೆ, ವಿಂಡೀಸ್ ಪರ ಪದಾರ್ಪಣೆ ಮಾಡಿದ ಲೆವಿಸ್ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಅವರ ವಿಕೆಟ್ ಕಬಳಿಸುವ ಮೂಲಕ ವೃತ್ತಿ ಜೀವನದಲ್ಲಿ ಉತ್ತಮ ಆರಂಭ ಪಡೆದಿದ್ದಾರೆ.